ಹಮಾಸ್-ಇಸ್ರೇಲ್ ಸಂಘರ್ಷವನ್ನು ಮಾತುಕತೆ ಮೂಲಕ ತಪ್ಪಿಸಬೇಕು : ಪ್ರಧಾನಿ ಮೋದಿ
ನವ ದೆಹಲಿ: ಹಮಾಸ್-ಇಸ್ರೇಲ್ ಸಂಘರ್ಷದಲ್ಲಿ ಸಂಭವಿಸುತ್ತಿರುವ ಅಮಾಯಕ ನಾಗರಿಕರ ಸಾವನ್ನು ತೀವ್ರವಾಗಿ ಖಂಡಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಮಾತುಕತೆ ಮೂಲಕ ಈ ಸಂಘರ್ಷವನ್ನು ತಪ್ಪಿಸಬೇಕು ಎಂದು ಶುಕ್ರವಾರ ಹೇಳಿದ್ದಾರೆ.
ಭಾರತ ಆಯೋಜಿಸಿದ್ದ ವರ್ಚುವಲ್ ವಾಯ್ಸ್ ಆಫ್ ಗ್ಲೋಬಲ್ ಸೌತ್ ಶೃಂಗಸಭೆಯ ಎರಡನೇ ಆವೃತ್ತಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಹಮಾಸ್-ಇಸ್ರೇಲ್ ಸಂಘರ್ಷದಿಂದ ಉದ್ಭವಿಸುವ ಪರಿಸ್ಥಿತಿಯನ್ನು ಎದುರಿಸಲು ಸಂಯಮದ ಜೊತೆಗೆ ಮಾತುಕತೆ ಮತ್ತು ರಾಜತಾಂತ್ರಿಕತೆಗೆ ದೆಹಲಿ ಒತ್ತು ನೀಡಿದೆ ಎಂದರು.
“ಪಶ್ಚಿಮ ಏಷ್ಯಾದಲ್ಲಿನ ಈ ಬೆಳವಣಿಗೆಗಳಿಂದ ಹೊಸ ಸವಾಲುಗಳು ಹೊರಹೊಮ್ಮುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಫ್ಯಾಲೆಸ್ತೀನ್ ಅಧ್ಯಕ್ಷ ಮಹಮೂದ್ ಅಬ್ಬಾಸ್ ಅವರೊಂದಿಗೆ ಮಾತನಾಡಿದ ನಂತರ, ನಾವು ಫ್ಯಾಲೆಸ್ತೀನ್ ಜನರಿಗೆ ಮಾನವೀಯ ನೆರವನ್ನು ಕೂಡಾ ಕಳುಹಿಸಿದ್ದೇವೆ. ಜಾಗತಿಕ ದಕ್ಷಿಣದ ದೇಶಗಳು ಹೆಚ್ಚಿನ ಜಾಗತಿಕ ಒಳಿತಿಗಾಗಿ ಒಂದಾಗಬೇಕಾದ ಸಮಯ ಇದು” ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ.
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಈ ಸಂಘರ್ಷದಿಂದ ಹೊಸ ಸವಾಲುಗಳು ಹೊರಹೊಮ್ಮುತ್ತಿವೆ ಮತ್ತು ಜಾಗತಿಕ ಒಳಿತಿಗಾಗಿ, ಜಾಗತಿಕ ದಕ್ಷಿಣದ ದೇಶಗಳು ಒಂದೇ ಧ್ವನಿಯಲ್ಲಿ ಮಾತನಾಡುವ ಸಮಯ ಬಂದಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಅಕ್ಟೋಬರ್ 7 ರಂದು ಇಸ್ರೇಲ್ ಅನಾಗರಿಕರ ಮೇಲೆ ಹಮಾಸ್ ನಡೆಸಿದ ಉಗ್ರ ದಾಳಿಯನ್ನು ಭಾರತ ಖಂಡಿಸಿದೆ. ಅದೇ ಸಮಯದಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷದಲ್ಲಿ ನಾಗರಿಕರ ಸಾವನ್ನು ಭಾರತ ಬಲವಾಗಿ ಖಂಡಿಸುತ್ತದೆ ಎಂದು ಪ್ರಧಾನಿ ಹೇಳಿದ್ದಾರೆ.
“ವಾಯ್ಸ್ ಆಫ್ ಗ್ಲೋಬಲ್ ಸೌತ್ 21ನೇ ಶತಮಾನದ ಬದಲಾಗುತ್ತಿರುವ ಜಗತ್ತನ್ನು ಪ್ರತಿಬಿಂಬಿಸುವ ಅತ್ಯಂತ ವಿಶಿಷ್ಟವಾದ ವೇದಿಕೆಯಾಗಿದೆ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.