ಶ್ರೀ ಸದ್ಗುರು ನಿತ್ಯಾನಂದ ಸ್ವಾಮೀಜಿ ಕೃತಿ; ನಿತ್ಯಾನಂದರಿಂದ ಬಿಡುಗಡೆ
ಉಡುಪಿ(ಉಡುಪಿ ಟೈಮ್ಸ್ ಕನ್ನಡ ) ನಿತ್ಯಾನಂದ ಸ್ವಾಮೀಜಿಗಳ ಕುರಿತಾಗಿರುವ ಅವಧೂತ ಲೀಲಾಮೃತ ಕೃತಿ ಎಲ್ಲರೂ ಓದಲೇಬೇಕಾದ ಅಮೂಲ್ಯ ಆಧ್ಯಾತ್ಮ ಗ್ರಂಥ. ಕಳೆದ ಅರವತ್ತು ವರ್ಷಗಳ ಹಿಂದೆ ಬಹಳಷ್ಟು ಕರಾವಳಿಗರು ಬದುಕು ಕಟ್ಟಿಕೊಳ್ಳಲು ಮುಂಬೈಗೆ ತೆರಳಿದ್ದರು. ಎಂಬುದಾಗಿ ಸಮಾಜ ಸೇವಕ ನಿತ್ಯಾನಂದ ಒಳಕಾಡು ತಿಳಿಸಿದರು.
ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಇವರ ಆಯೋಜನೆಯಲ್ಲಿ ಯುವಸಾಹಿತಿ ತಾರಾನಾಥ್ ಮೇಸ್ತ ಶಿರೂರು ಅವರು ಬರೆದಿರುವ, “ಅವಧೂತ ಲೀಲಾಮೃತ” ಶ್ರೀಸದ್ಗುರು ನಿತ್ಯಾನಂದ ಸ್ವಾಮೀಜಿ, ಗ್ರಂಥದ ಬಿಡುಗಡೆ ಕಾರ್ಯಕ್ರಮವು ಬ್ರಹ್ಮಾವರ ಇಲ್ಲಿಯ ಅಪ್ಪ ಅಮ್ಮ ಅನಾಥಾಲಯದ ಸಭಾಂಗಣದಲ್ಲಿ ಬುಧವಾರ ನಡೆಯಿತು.
ನಿತ್ಯಾನಂದ ಸ್ವಾಮೀಜಿಗಳಿಂದ ಅನುಗ್ರಹಪಡೆದು ಬದುಕಿನಲ್ಲಿ ಒಳಿತು ಪಡೆದವರು ಸಾವಿರಾರು ಮಂದಿ. ಇಗಲೂ ನಾವು ಮುಂಬೈಗೆ ಹೋದಾಗ ಅಲ್ಲಿಯ ಹೋಟೆಲು, ಅಂಗಡಿ ಮೊದಲಾದ ವಾಣಿಜ್ಯ ಉದ್ಯಮಗಳಲ್ಲಿ ಪೂಜಿಸಲ್ಪಡುವ ನಿತ್ಯಾನಂದ ಸ್ವಾಮೀಜಿಗಳ ಫೋಟಗಳು ಕಾಣಲು ಸಿಗುತ್ತವೆ ಎಂದು ಕೃತಿ ಬಿಡುಗಡೆಗೊಳಿಸಿದ ನಿತ್ಯಾನಂದ ಒಳಕಾಡು ಅವರು ಹೇಳಿದರು. ನನ್ನ ಅಜ್ಜಿ ನಿತ್ಯಾನಂದ ಸ್ವಾಮಿಗಳ ಪವಾಡಗಳನ್ನು ಉಡುಪಿಯಲ್ಲಿ ಕಂಡವರು. ಅಜ್ಜಿಯ ಆಜ್ಞೆಯಂತೆ ನಮ್ಮಮ್ಮ ನನಗೆ ನಿತ್ಯಾನಂದ ಎಂದ ನಾಮಕರಣ ಮಾಡಿದರು ಎಂದು ತನಗಿರುವ ನಿತ್ಯಾನಂದ ಹೆಸರಿನ ಗುಟ್ಟನ್ನು ಬಿಚ್ಚಿಟ್ಟರು.
ಕೊರೊನಾ ಕೋವಿಡ್-19 ಸೋಂಕು ಸಾರ್ವಜನಿಕ ವಲಯದಲ್ಲಿ ಹರಡದಂತೆ ತಡೆಯಲು ಸರಕಾರವು ಲಾಕ್ ಡೌನ್ ಅಸ್ತ್ರ ಬಳಸಿತು. ಆ ಸಂದರ್ಭ ಎತ್ತಲೂ ಹೋಗಲಾಗದೆ ಮನೆಯಲ್ಲಿ ಬಂಧಿ ಆಗಬೇಕಾದ ಪರಿಸ್ಥಿತಿ ಎದುರಾಯಿತು. ಲಾಕ್ ಡೌನ್ ಸಮಯದಲ್ಲಿ ನನ್ನಿಂದ ಅವಧೂತ ಲೀಲಾಮೃತ ಕೃತಿ ರಚಿತವಾಯಿತೆಂದು ಲೇಖಕ ತಾರಾನಾಥ್ ಮೇಸ್ತ ಶಿರೂರು ಅವರು ಪ್ರಾಸ್ತವಿಕ ಮಾತುಗಳಲ್ಲಿ ಹೇಳಿದರು.
ಪುರಾಣಗಳ ಕಾಲದಿಂದಲೂ ಋಷಿ- ಮುನಿಗಳು ಸಮಾಜಕ್ಕೆ ಉಪಯುಕ್ತ ಸಂದೇಶ ನೀಡಿ ಆರೋಗ್ಯಪೂರ್ಣ ಸಮಾಜ ರೂಪಿಸಲು ಪ್ರೇರಕರಾಗಿದ್ದಾರೆ. ಇಂದು ವಿಜ್ಞಾನ ತಂತ್ರಜ್ಞಾನ ಎಷ್ಟೇ ಬೆಳೆದರೂ ಸುಖ ಶಾಂತಿ ನೆಮ್ಮದಿಯ ಬದುಕಿಗೆ ಆಧ್ಯಾತ್ಮದ ಬೆಳಕಿನ ಅಗತ್ಯವಿದೆ. ಸದ್ಗುರು ನಿತ್ಯಾನಂದ ಸ್ವಾಮೀಜಿ ಅನೇಕ ಪವಾಡಗಳ ಮೂಲಕ ಸಮಾಜಕ್ಕೆ ಮಾರ್ಗದರ್ಶನ, ಪ್ರೇರಣೆ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಅಪ್ಪ ಅಮ್ಮ ಅನಾಥಾಲಯದ ಸಂಚಾಲಕ ಪ್ರಶಾಂತ್ ಪೂಜಾರಿ ಕೂರಾಡಿ, ನಿರ್ಮಿತಿ ಕೇಂದ್ರದ ಅಭಿಜಿತ್ ಕುಮಾರ್ ಹಾಗೂ ಆಶ್ರಮವಾಸಿಗಳು ಉಪಸ್ಥಿತರಿದ್ದರು.