ಮಲೆಕುಡಿಯ ಸಂಘದ ಕಟ್ಟಡಕ್ಕೆಅನುದಾನ ಬಿಡುಗಡೆ: ಸುನಿಲ್ ಕುಮಾರ್

 
 ಉಡುಪಿ (ಉಡುಪಿ ಟೈಮ್ಸ್ ವರದಿ) ;ಮಲೆಕುಡಿಯ ಸಂಘದ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ  ಸೇರಿದಂತೆ ಇನ್ನಿತರ ಚಟುವಟಿಕೆಗಳನ್ನು ನಡೆಸಲು ಕಾರ್ಕಳ ತಾಲೂಕಿನ ಮಾಳದಲ್ಲಿ ನಿರ್ಮಾಣವಾಗಲಿರುವ ಜಿಲ್ಲಾ ಮಲೆಕುಡಿಯ ಸಂಘದ ಕಟ್ಟಡಕ್ಕೆ ಸರಕಾರದ ವತಿಯಿಂದ 2 ಕೋಟಿ ಅನುದಾನ ಬಿಡುಗಡೆಗೊಂಡಿದ್ದು ಮಂಜೂರು ಆದೇಶ ಪ್ರತಿಯನ್ನು ಮಲೆಕುಡಿಯ ಸಮಾಜ ಬಾಂಧವರ ಸಮಲೋಚನಾ ಸಭೆಯಲ್ಲಿ ಶಾಸಕರಾದ ವಿ ಸುನಿಲ್ ಕುಮಾರ್ ಸಂಘದ  ಜಿಲ್ಲಾಧ್ಯಕ್ಷ ಮಂಜಪ್ಪಗೌಡ ಇವರಿಗೆ ಹಸ್ತಾಂತರಿಸಿದರು.       

 ಈ ಸಂದರ್ಭ ಶಾಸಕರಾದ ವಿ ಸುನಿಲ್ ಕುಮಾರ್ ಮಾತನಾಡಿ,  ಮಲೆಕುಡಿಯ ಜನಾಂಗದ ಹತ್ತಾರು ಸಮಸ್ಯೆಗಳು ನನ್ನ ಬಳಿ ಬಂದಿದ್ದು ಅದನ್ನು ಹಂತ ಹಂತವಾಗಿ ಈಡೇರಿಸಿ ಕೊಟ್ಟ ಬಗ್ಗೆ ಅತ್ಯಂತ ತೃಪ್ತಿ ಇದೆ. ಕಳೆದ 3-4 ವರ್ಷಗಳ ಹಿಂದೆ ಜಿಲ್ಲಾ ಮಲೆಕುಡಿಯ ಸಂಘವು ನನ್ನ ಬಳಿ ಸಮುದಾಯದ ವಿವಿಧ ರೀತಿಯ ಚಟುವಟಿಕೆಗಳನ್ನು ನಡೆಸಲು ದೊಡ್ಡ ಮಟ್ಟದ ಸಮುದಾಯ ಭವನವನ್ನು ನಿರ್ಮಿಸಿ ಕೊಡುವಂತೆ ಪದೇ ಪದೇ ಒತ್ತಡವನ್ನು ಹೇರುತ್ತಿದ್ದ  ಹಿನ್ನೆಲೆಯಲ್ಲಿ ಕಳೆದ ಸಾಲಿನಲ್ಲಿ 20 ಲಕ್ಷ ಮೊತ್ತದಲ್ಲಿ ಪ್ರಾರಂಭಿಕ ಹಂತದ  ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಿದ್ದು ಇದೀಗ ಸರ್ಕಾರದಿಂದ 2 ಕೋಟಿ ಅನುದಾನ ಮಂಜೂರು ಆಗಿದ್ದು ಕಾಮಗಾರಿ ಅತೀ ಶೀಘ್ರ ಪ್ರಾರಂಭಗೊಂಡು ವರ್ಷದ ಅಂತ್ಯದೊಳಗೆ ಕಟ್ಟಡ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.     

ರಾಜ್ಯ ಮಲೆಕುಡಿಯ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಧರ ಗೌಡ ಈದು ಪ್ರಾಸ್ತಾವಿಕವಾಗಿ ಮಾತನಾಡಿ, ಯಾವುದೇ ರೀತಿಯ ಬೇಡಿಕೆಗಳನ್ನು ಶಾಸಕರ ಮುಂದೆ ಇಟ್ಟಾಗ ಅದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಬೇಡಿಕೆ ಈಡೇರಿಸಿಕೊಟ್ಟಿರುವುದನ್ನು ನೆನಪಿಸುತ್ತಾ ಇದೀಗ 2 ಕೋಟಿ ಅನುದಾನವನ್ನು ಸಮುದಾಯ ಭವನ ನಿರ್ಮಾಣಕ್ಕೆ ಒದಗಿಸಿ ಕೊಟ್ಟಿರುವುದು ಸಮುದಾಯದಲ್ಲಿ ಸಂತಸ ತಂದಿದೆ ಎಂದು ಶಾಸಕರಿಗೆ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಮಲೆಕುಡಿಯ ಸಂಘದ ಗೌರವ ಸಲಹೆಗಾರರಾದ ನೋನಯ್ಯ ಗೌಡ ರೆಂಜಾಳ, ಜಿಲ್ಲಾ ಮಲೆಕುಡಿಯ ಸಂಘದ ಉಪಾಧ್ಯಕ್ಷರಾದ ಸುಂದರ ಗೌಡ ಮುದ್ರಾಡಿ, ಗೋಪಾಲ್ ಗೌಡ ಮಾಳ, ಪೂರ್ವ ಜಿಲ್ಲಾಧ್ಯಕ್ಷ ಸುಧಾಕರ ಗೌಡ ನಾಡ್ಪಾಲು, ಹೆಬ್ರಿ ತಾಲೂಕು ಸಮಿತಿಯ ಅಧ್ಯಕ್ಷ ಉದಯ್ ಗೌಡ ಬಲ್ಲಾಡಿ, ಕಾರ್ಕಳ ತಾಲೂಕು ಸಮಿತಿಯ ಅಧ್ಯಕ್ಷರಾದ ಶೇಖರ್ ಗೌಡ ಮಾಳ ಉಪಸ್ಥಿತಿದ್ದರು.  ಸಭೆಯಲ್ಲಿ ರಾಜ್ಯ ಮಲೆಕುಡಿಯ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರುಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!