ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ ಪೇಜಾವರಶ್ರೀ ಆರೋಗ್ಯ: ಕೆಎಂಸಿ ವೈದ್ಯರು
ಉಡುಪಿ: ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿಯ ಆರೋಗ್ಯ ಮತ್ತಷ್ಟು ಗಂಭೀರವಾಗಿದೆ. ಶ್ರೀಗಳ ಆರೋಗ್ಯ ಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ ಎಂದು ಮಣಿಪಾಲದ ಕೆಎಂಸಿ ವೈದ್ಯರು ತಿಳಿಸಿದ್ದಾರೆ.
ಸ್ವಾಮೀಜಿ ಅವರಿಗೆ ಇದುವರೆಗೂ ಪ್ರಜ್ಞೆ ಬಂದಿಲ್ಲ. ಪರಿಸ್ಥಿತಿ ಸುಧಾರಿಸದೆ ಗಂಭೀರವಾಗುತ್ತಿದೆ. ಸದ್ಯ ಜೀವರಕ್ಷಕ ಸಾಧನಗಳ ನೆರವನ್ನು ನೀಡಲಾಗಿದೆ ಎಂದು ಶುಕ್ರವಾರ ವೈದ್ಯರು ಮಾಹಿತಿ ನೀಡಿದ್ದಾರೆ.
ಸಿದ್ಧಗಂಗಾ ಮಠದ ಸಿದ್ಧಲಿಂಗ ಶ್ರೀಗಳು ಭೇಟಿನೀಡಿ, ‘ಪೇಜಾವರ ಶ್ರೀಗಳು ನಾಡಿನ ಹೆಮ್ಮೆಯ ಸಂತರು. ಎಲ್ಲ ಸಮಾಜಗಳ ಪ್ರೀತಿಗೆ ಪಾತ್ರರಾದವರು. ಸಮಾಜಕ್ಕಾಗಿ ಬದುಕನ್ನು ಮೀಸಲಿಟ್ಟಿದ್ದ ಸ್ವಾಮೀಜಿ ಆರೋಗ್ಯ ಹದಗೆಟ್ಟಿದೆ. ಶೀಘ್ರ ಗುಣಮುಖರಾಗಲಿ’ ಎಂದು ಹಾರೈಸಿದರು. ಆರ್‌ಎಸ್‌ಎಸ್ ಸಹ ಕಾರ್ಯವಾಹ ಭಯ್ಯಾಜಿ ಜೋಷಿ ಆಸ್ಪತ್ರೆಗೆ ಭೇಟಿ ನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದರು. ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದರು.
ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದ ಪುರಿ ಸ್ವಾಮೀಜಿ ಮಾತನಾಡಿ, ಕನಕ ಗುರುಪೀಠ ಹಾಗೂ ಪೇಜಾವರ ಶ್ರೀಗಳ ನಡುವೆ ಅವಿನಾಭಾವ ಸಂಬಂಧ ಇತ್ತು. ಮಠಕ್ಕೆ ಹಲವು ಬಾರಿ ಮಾರ್ಗದರ್ಶನ ನೀಡಿದ್ದಾರೆ. ಕೃಷ್ಣನಿಗೂ ಕನಕನಿಗೆ ಇದ್ದ ಸಂಬಂಧ ಪೇಜಾವರ ಮಠಕ್ಕೂ ಕನಕ ಗುರುಪೀಠಕ್ಕೂ ಇತ್ತು ಎಂದರು.
ಸಚಿವ ಮಾಧುಸ್ವಾಮಿ, ಗೌರಿಗದ್ದೆಯ ವಿನಯ್ ಗುರೂಜಿ, ವಿಧಾನ ಪರಿಷತ್ ಸದಸ್ಯ ಶರವಣ, ಶಾಸಕರಾದ ರಘುಪತಿ ಭಟ್, ಎಸ್.ಎ.ರಾಮದಾಸ್, ವಿದ್ವಾನ್ ಅರಳುಮಲ್ಲಿಗೆ ಪಾರ್ಥಸಾರಥಿ, ಯೋಗೀಶ್ ಶೆಟ್ಟಿ ಆಸ್ಪತ್ರೆಗೆ ಭೇಟಿನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದರು