ಇಚ್ಚಾಶಕ್ತಿಯಿಂದ ಕೆಲಸಮಾಡಿ ಪಿಡಿಒಗಳಿಗೆ ಸೂಚನೆ
ಬಂಟ್ವಾಳ: ಎನ್.ಆರ್.ಜಿ.ಯೋಜನೆಯಡಿ ತಾಲೂಕಿನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಗುರಿ ತಲುಪುವ ನಿಟ್ಟಿನಲ್ಲಿ ಪಿ.ಡಿ.ಒ.ಗಳು ಇಚ್ಚಾಶಕ್ತಿಯಿಂದ ಕೆಲಸ ಮಾಡುವಂತೆ ಬಂಟ್ವಾಳ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ಸೂಚಿಸಿದ್ದಾರೆ.
ಶುಕ್ರವಾರ ಬಂಟ್ವಾಳ ತಾ. ಪಂ. ನ ಎಸ್.ಜಿ.ಎಸ್.ವೈ .ಸಭಾಂಗಣದಲ್ಲಿ ನಡೆದ ಬಂಟ್ವಾಳ ತಾಲೂಕಿನ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಧಿಕಾರಿಗಳಿಗೆ ಇಚ್ಛಾಶಕ್ತಿ ಇದ್ದಾಗ ಮಾತ್ರ ಎನ್.ಆರ್.ಜಿ ಯೋಜನೆ ನಿಗದಿತ ಗುರಿ ತಲುಪಲು ಸಾಧ್ಯ ಎಂದು ಕಿವಿ ಮಾತು ಹೇಳಿದರು. ಪಿ.ಡಿ.ಒ.ಗಳು ತಾಲೂಕಿನ ಪ್ರತಿ ಶಾಲೆಯ ಶಾಲಾಭಿವೃದ್ದಿ ಸಮಿತಿಯ ಪ್ರತ್ಯೇಕ ಸಭೆ ನಡೆಸಿ ಎಲ್ಲಾ ಶಾಲೆಗಳಿಗೆ ಅವರಣಗೋಡೆ ನಿರ್ಮಾಣದ ಬಗ್ಗೆ ಮಾಹಿತಿ ನೀಡಿ ಕ್ರಿಯಾ ಯೋಜನೆಯಲ್ಲಿ ಸೇರಿಸಬೇಕು ಎಂದು ಅವರು ಹೇಳಿದರು. .
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬಾಕಿಯಾದ ಕಾಮಗಾರಿಗಳ ಕ್ರಿಯಾಯೋಜನೆ ತಯಾರಿಸಿ ಮಂಜೂರಾತಿಗಾಗಿ ತಿಂಗಳ ಅಂತ್ಯದೊಳಗೆ ತಾಲೂಕು ಪಂಚಾಯತ್ ಗೆ ಸಲ್ಲಿಸುವಂತೆ ಕಾರ್ಯ ನಿರ್ವಹಣಾಧಿಕಾರಿ ರಾಜಣ್ಣ ನಿರ್ದೇಶಿಸಿದರು. 14ನೇ ಹಣಕಾಸು ಯೋಜನೆಯಲ್ಲಿ ತಾಲೂಕಿನ ಅಭಿವೃದ್ಧಿ ಕಾರ್ಯಕ್ಕಾಗಿ ಅನುದಾನ ಮಂಜೂರಾಗಿದ್ದು, ಇದು ಸರಿಯಾದ ರೀತಿಯಲ್ಲಿ ಬಳಕೆಯಾಗಬೇಕಾಗಿದೆ ಎಂದು ಬಂಟ್ವಾಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಪಿ.ಡಿ.ಒ.ಗಳಿಗೆ ತಿಳಿಸಿದರು.
ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಮೀ ಸಿ.ಬಂಗೇರ ವೇದಿಕೆಯಲ್ಲಿ ಉಪಸ್ಥಿತರಿದ್ದರು