ಶಬರಿಮಲೆಗೆ ಮಹಿಳಾ ಪ್ರವೇಶ ತೀರ್ಪು ಅಂತಿಮವಲ್ಲ: ‘ಸುಪ್ರೀಂ’ ಶಾಕ್!
ನವದೆಹಲಿ: ಅಸಂಖ್ಯ ಹಿಂದೂಪರ ಸಂಘಟನೆಗಳ ಅಸಮಾಧಾನಕ್ಕೆ ಕಾರಣವಾಗಿದ್ದ ಶಬರಿಮಲೆಗೆ ಮಹಿಳೆಯರ ಪ್ರವೇಶ ಕುರಿತ ಸುಪ್ರೀಂಕೋರ್ಟ್ ತೀರ್ಪು ಅಂತಿಮವಲ್ಲ ಎಂದು ಹೇಳುವ ಮೂಲಕ ಮುಖ್ಯ ನ್ಯಾಯಮೂರ್ತಿಗಳು ಮಹಿಳಾಪರ ಹೋರಾಟಗಾರ್ತಿಯರಿಗೆ ಶಾಕ್ ನೀಡಿದೆ.
ಹೌದು… ಪವಿತ್ರ ಯಾತ್ರಾ ಸ್ಥಳ ಶಬರಿಮಲೆಗೆ ಮಹಿಳೆಯ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂದು 2018ರಲ್ಲಿ ನೀಡಿದ್ದ ತೀರ್ಪು ಅಂತಿಮವೇನಲ್ಲ. ಈ ಕುರಿತ ವಿಚಾರಣೆ ಪ್ರಗತಿಯಲ್ಲಿದೆ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್ ಬಾಬ್ಡೆ ಹೇಳಿದ್ದಾರೆ.
ಮಹಿಳಾ ಪರ ಹೋರಾಟಗಾರ್ತಿ ಬಿಂದು ಅಮ್ಮಿನಿ ಅವರ ಅರ್ಜಿ ವಿಚಾರಣೆ ನಡೆಸುತ್ತಿದ್ದ ವೇಳೆ ಮುಖ್ಯ ನ್ಯಾಯಮೂರ್ತಿ ಎಸ್ ಎ ಬಾಬ್ಡೇ ಇಂತಹ ಅಭಿಪ್ರಾಯಪಟ್ಟಿದ್ದು, ‘ಶಬರಿಮಲೆ ವಿಚಾರದ ಕುರಿತು ಸುಪ್ರೀಂ ಕೋರ್ಟ್ ನ ದೊಡ್ಡ ಪೀಠ ವಿಚಾರಣೆ ನಡೆಸುತ್ತಿದ್ದು, 2018ರಲ್ಲಿ ನೀಡಿದ್ದ ತೀರ್ಪು ಅಂತಿಮವಲ್ಲ ಎಂದು ಹೇಳಿದ್ದಾರೆ.
ಬಿಂದು ಅಮ್ಮಿನಿ ಈ ಹಿಂದೆ ಶಬರಿಮಲೆಗೆ ಪ್ರವೇಶ ಮಾಡಲು ಮುಂದಾದಾಗ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಅವರ ಮೇಲೆ ದಾಳಿ ಮಾಡಿದ್ದರು. ಬಿಂದು ಮೇಲೆ ಪೆಪ್ಪರ್ ಸ್ಪ್ರೇ ಮತ್ತು ಖಾರದ ಪುಡಿ ಎರಚಿ ಆಕೆ ದೇಗುಲ ಪ್ರವೇಶ ಮಾಡದಂತೆ ತಡೆದಿದ್ದರು. ಇದರ ವಿರುದ್ಧ ಬಿಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಇನ್ನು ನಿನ್ನೆ ನಡೆದ ವಿಚಾರಣೆಯಲ್ಲಿ ಶಬರಿಮಲೆ ದೇವಸ್ಥಾನ ಪ್ರವೇಶಕ್ಕೆ ತಡೆಯೊಡ್ಡಿರುವುದನ್ನು ಪ್ರಶ್ನಿಸಿ ಕೇರಳದ ಮಹಿಳೆ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಮುಂದಿನ ವಾರ ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿತ್ತು. ಎಲ್ಲ ವಯೋಮಾನದ ಮಹಿಳೆಯರಿಗೆ ಶಬರಿಮಲೆ ದೇವಸ್ಥಾನ ಪ್ರವೇಶಿಸಲು ಅನುಮತಿ ನೀಡಿ ಸುಪ್ರೀಂ ಕೋರ್ಟ್ 2018ರ ಸೆಪ್ಟಂಬರ್‌ನಲ್ಲಿ ತೀರ್ಪು ನೀಡಿತ್ತು. ತೀರ್ಪಿನ ಹೊರತಾಗಿಯೂ ಮಹಿಳೆಯರ ಪ್ರವೇಶಕ್ಕೆ ತಡೆಯೊಡ್ಡಲಾಗುತ್ತಿದೆ. ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ, ನ್ಯಾಯಮುರ್ತಿಗಳಾದ ಬಿ.ಆರ್.ಗವಾಯಿ ಮತ್ತು ಸೂರ್ಯ ಕಾಂತ್ ಅವರಿದ್ದ ನ್ಯಾಯಪೀಠವು, ಹಿರಿಯ ವಕೀಲ ಕಾಲಿನ್ ಗೊನ್ಸಾಲ್‌ವೇಸ್ ಅವರು ಮಹಿಳೆಯ ಪರ ಸಲ್ಲಿಸಿದ ಅರ್ಜಿಯನ್ನು ಮುಂದಿನ ವಾರ ವಿಚಾರಣೆಗೆ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿತು.