ಮೆಹಂದಿಯಿಂದ ಹಿಂದಿರುಗಿ ಬರುತ್ತಿದ್ದ ಕಾರು ಪಲ್ಟಿ: ಪತ್ನಿ ಸಾವು, ಪತಿ ಗಂಭೀರ

ಬಂಟ್ವಾಳ: ರಾ.ಹೆ.ಯ ವಿಲ್ಲುಪುರಂ-ಬಂಟ್ವಾಳ    ಪುಂಜಾಲಕಟ್ಟೆಯ ಶ್ರೀರಾಮ ಭಜನಾ ಮಂದಿರ ಬಳಿಯ ತಿರುವಿನಲ್ಲಿ ಸ್ವಿಫ್ಟ್ ಡಿಸೈರ್  ಕಾರು ರಸ್ತೆಯಿಂದ ಸುಮಾರು 10 ಅಡಿ ಕೆಳಕ್ಕೆ ಮಗುಚಿ ಬಿದ್ದು ಪತ್ನಿ ಮೃತಪಟ್ಟರೆ,ಪತಿ ಗಾಯಗೊಂಡು ಆಸ್ಪತ್ರೆ ಸೇರಿರುವ  ಘಟನೆ ಸೋಮವಾರ ತಡರಾತ್ರಿ ಸಂಭವಿಸಿದೆ. 

ಬಂಟ್ವಾಳ ತಾಲೂಕು ತೆಂಕಕಜೆಕಾರು ಗ್ರಾಮ ಕರ್ಲ ನಿವಾಸಿ, ನಿವೃತ್ತ ಯೋಧ, ನಿವೃತ್ತ ಸ್ಟೇಟ್ ಬ್ಯಾಂಕ್ ಉದ್ಯೋಗಿ ಸದಾನಂದ (61) ಅವರು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಇವರ ಪತ್ನಿ ಇಂದಿರಾ(58)  ಮೃತ ಪಟ್ಟಿದ್ದಾರೆ.      ಪತಿ- ಪತ್ನಿ ಇಬ್ಬರೂ  ಶೀರ್ತಾಡಿ ಕಾಶಿಪಟ್ಣದಲ್ಲಿರುವ  ಮಗಳ ಮೈದುನನ ವಿವಾಹ ಮದರಂಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾಪಾಸ್ ತಮ್ಮ ಮನೆಗೆ ಬರುತ್ತಿದ್ದಾಗ ರಾತ್ರಿ ಸುಮಾರು 11.30 ರ ವೇಳೆಗೆ ಪುಂಜಾಲಕಟ್ಟೆ ಶ್ರೀ ರಾಮ ನಗರ ಶ್ರೀ ರಾಮ ಭಜನಾ ಮಂದಿರ ಬಳಿ ತಿರುವಿನಲ್ಲಿ  ಕಾರು ಚಲಾಯಿಸುತ್ತಿದ್ದ  ಸದಾನಂದ ಅವರ ನಿಯಂತ್ರಣ ತಪ್ಪಿ ಮುಗುಚಿ ಬಿದ್ದು ಈ ಘಟನೆ ನಡೆದಿದೆ. 

ಶ್ರೀ ರಾಮ ಭಜನಾ ಮಂದಿರದ ಬಳಿ ರಸ್ತೆ ಅಭಿವೃದ್ದಿ ಕಾಮಗಾರಿಯ ಹಿನ್ನಲೆಯಲ್ಲಿ ರಸ್ತೆ ಬದಿಯಲ್ಲಿ ಬೃಹತ್ ಗಾತ್ರದ ಮರಗಳನ್ನು ಕಡಿದು ಹಾಕಲಾಗಿದ್ದು,ಮರದ ದಿಮ್ಮಿಗಳು ಸ್ಥಳದಲ್ಲಿ ಹಾಗೆಯೇ ಉಳಿದಿತ್ತು.  ಕಾರು  ಬಿದ್ದ ರಭಸಕ್ಕೆ ಈ ಮರದ ದಿಮ್ಮಿಗೆ ಬಡಿದ ಪರಿಣಾಮ ಮುಂಭಾಗ ಜಖಂಗೊಂಡಿದ್ದು, ಕಾರಿನ ಮುಂದಿನ ಸೀಟಿನಲ್ಲಿದ್ದ  ದಂಪತಿಗಳು ಗಂಬೀರ ಸ್ವರೂಪದ ಗಾಯಗೊಂಡಿದ್ದರು. ಕಾರು ಮರದ ದಿಮ್ಮಿಯ ಎಡೆಗೆ ಸಿಲುಕಿದ್ದರಿಂದ ಈ ಘಟನೆ ತಕ್ಷಣಕ್ಕೆ ಯಾರ ಗಮನಕ್ಕೆ ಬಂದಿರಲಿಲ್ಲ, ಸದಾನಂದ ಅವರ ಬೊಬ್ಬೆ ಕೇಳಿ ಘಟನಾ ಸ್ಥಳದಲ್ಲಿನ ಹತ್ತಿರದ ಮನೆಯವರು  ಸ್ಥಳೀಯರನ್ನು ಕರೆಸಿ ಕಾರನ್ನು ನೇರಗೊಳಿಸಿ ಗಾಯಾಳುಗಳನ್ನು ಹೊರತೆಗೆದು 108 ಅಂಬ್ಯುಲೆನ್ಸ್ ನಲ್ಲಿ ಬಂಟ್ವಾಳ ಆಸ್ಪತ್ರೆ ಗೆ ಸಾಗಿಸಲಾಯಿತು.

ಆದರೆ ದಾರಿ ಮಧ್ಯದಲ್ಲಿ ಇಂದಿರಾ ಅವರು ಕೊನೆಯುಸಿರೆಳೆದಿದ್ದಾರೆ‌. ಸದಾನಂದ ಅವರನ್ನು ಹೆಚ್ಚಿನ‌ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುದ್ದಿ ತಿಳಿದ ಪುಂಜಾಲಕಟ್ಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ  ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ

Leave a Reply

Your email address will not be published. Required fields are marked *

error: Content is protected !!