ಆನ್’ಲೈನ್’ನಲ್ಲಿ ಕೇಕ್ ಆರ್ಡರ್ ಮಾಡಿ ರೂ.71,500 ಕಳೆದುಕೊಂಡ ಮಹಿಳೆ!
ಬೆಂಗಳೂರು: ಆನ್’ಲೈನ್’ನಲ್ಲಿ ಕೇಕ್ ಆರ್ಡರ್ ಮಾಡಿದ್ದ ಮಹಿಳೆಯೊಬ್ಬರೂ ರೂ.71,500 ಕಳೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸಾವಿತ್ರಿ (ಹೆಸರು ಬದಲಿಸಲಾಗಿದೆ) ಎಂಬುವವರು ಖಾಸಗಿ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ದಿನಗಳ ಹಿಂದೆ ಮಗಳ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಲ್ಯಾವೆಲ್ಲೆ ರಸ್ತೆಯಲ್ಲಿರುವ ಅಂಗಡಿಯೊಂದರಲ್ಲಿ ಆನ್’ಲೈನ್ ಮೂಲಕ ಕೇಕ್ ಬುಕ್ಕಿಂಗ್ ಮಾಡಿದ್ದರು. ಈ ವೇಳೆ ಸುನಿತಾ ಅವರಿಗೆ ಕರೆ ಮಾಡಿರುವ ಅಪರಿಚಿತ ವ್ಯಕ್ತಿ, ಕೇಕ್ ಬುಕ್ಕಿಂಗ್ ಖಾತ್ರಿಪಡಿಸಿಕೊಳ್ಳಬೇಕೆಂದು ಹೇಳಿ ಡೆಬಿಟ್ ಕಾರ್ಡ್ ಮಾಹಿತಿ ಕೇಳಿದ್ದಾನೆ.
ಆತನ ಮಾತನ್ನು ನಂಬಿರುವ ಸುನಿತಾ ಅವರು ಕಾರ್ಡ್ ಮಾಹಿತಿ ಹಾಗೂ ಒಟಿಪಿ ಹೇಳಿದ್ದಾರೆ. ಇದಾದ ಕೆಲವೇ ನಿಮಿಷಗಳಲ್ಲಿ ಸುನಿತಾ ಅವರ ಬ್ಯಾಂಕ್ ಖಾತೆಯಿಂದ ಹಣ ಡ್ರಾ ಆಗಿದೆ. ಕೇಕ್ ಅಂಗಡಿಯನ್ನು ವಿಚಾರಿಸಿದಾಗ ತಾವು ಕರೆ ಮಾಡಿಲ್ಲವೆಂದಿದ್ದಾರೆ.
ಹಣ ಕಳೆದುಕೊಂಡಿರುವ ಸುನಿತಾ ಅವರು ಗಾಬರಿಗೊಂಡು ಪೊಲೀಸರಿಗೆ ದೂರು ನೀಡಿದ್ದಾರೆ. ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಅಪರಿಚತ ವ್ಯಕ್ತಿ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿರುವ ಕಬ್ಬನ್ ಪಾರ್ಕ್ ಪೊಲೀಸರು, ತನಿಖೆ ಆರಂಭಿಸಿದ್ದಾರೆ.