ಕೆಎಂಸಿ ಆಸ್ಪತ್ರೆಗೆ ದಾಖಲಾದ ಮಹಿಳೆಗೆ ಕೊರೋನ ಸೋಂಕು ಇಲ್ಲ: ಡಿಎಚ್ಒ
ಶಂಕಿತ ಕೊರೋನ ವೈರಸ್ ಸೋಂಕು ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಸಾಗರ ತಾಲೂಕು ಆನಂದಪುರದ 68 ವರ್ಷ ಪ್ರಾಯದ ಮಹಿಳೆಗೆ ಕೊರೋನ ಸೋಂಕು ಇಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ (ಡಿಎಚ್ಒ) ಡಾ.ರಾಜೇಶ್ ಸುರಗಿಹಳ್ಳಿ ತಿಳಿಸಿದ್ದಾರೆ.
ಇತ್ತೀಚೆಗೆ ಸೌದಿ ಅರಬಿಕ್ಕೆ ತೆರಳಿ ಹಿಂದಿರುಗಿದ್ದ ಮಹಿಳೆಗೆ ಜ್ವರ, ಕೆಮ್ಮು ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಶಿವಮೊಗ್ಗದ ಮೆಡಿಕಲ್ ಕಾಲೇಜು ವಿಆರ್ಡಿಎಲ್ನಲ್ಲಿ ಕೊರೋನ ವೈರಲ್ ಸೋಂಕು ಪರೀಕ್ಷೆ ನಡೆಸಲಾಗಿತ್ತು. ಅದರ ವರದಿ ಇದೀಗ ಬಂದಿದ್ದು, ನೆಗಟಿವ್ ಆಗಿದ್ದು, ಸಾರ್ವಜನಿಕರು ಯಾವುದೇ ರೀತಿಯಲ್ಲಿ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಡಿಎಚ್ಒ ಸ್ಪಷ್ಟಪಡಿಸಿದ್ದಾರೆ.
ಸದ್ಯ ಈ ಮಹಿಳೆ ಮಣಿಪಾಲದ ಕೆಎಂಸಿ ಆಸ್ಪತ್ರೆಯ ವಿಶೇಷ ವಾಡ್ರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲೂ ಕೂಡಾ ವೈರಸ್ನ ದೃಢೀಕರಣಕ್ಕಾಗಿ ಅವರ ಗಂಟಲಿನ ದ್ರವವನ್ನು ಬುಧವಾರ ಬೆಂಗಳೂರು ಮೆಡಿಕಲ್ ಕಾಲೇಜಿನ ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಗಿದೆ ಎಂದು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ಚಂದ್ರ ಸೂಡ ತಿಳಿಸಿದ್ದಾರೆ. ಸಾಗರ ತಾಲೂಕಿನ ಮಹಿಳೆಯೊಬ್ಬರಿಗೆ ಕೊರೋನ ಸೋಂಕು ತಗುಲಿದೆ ಎಂದು ಬುಧವಾರ ಸಾಮಾಜಿಕ ಜಾಲತಾಣಗಳಲ್ಲಿ ವದಂತಿ ಹಬ್ಬಿತ್ತು. ಇದೀಗ ಅವರ ಪರೀಕ್ಷಾ ವರದಿ ನೆಗಟಿವ್ ಬಂದಿರುವುದು ಸಾಗರ, ಮಣಿಪಾಲದಲ್ಲಿ ಸೃಷ್ಟಿಯಾಗಿದ್ದ ಆತಂಕ ದೂರವಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಕೊರೊನಾ ಬಗ್ಗೆ ಸುಳ್ಳು ಸುದ್ದಿ ಅಥವಾ ವದಂತಿಗಳನ್ನು ಹರಡಬಾರದು. ಇಂತಹ ಸುದ್ದಿಗಳನ್ನು ಹರಡುವವರ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು, ಕೊರೊನ ಶಂಕಿತ ವ್ಯಕ್ತಿಯ ಗುರುತು, ವಿಳಾಸ ಅಥವಾ ಇನ್ನಿತರ ವೈಯಕ್ತಿಕ ಮಾಹಿತಿಯನ್ನು ಸಹ ಮಾದ್ಯಮದಲ್ಲಿ ಬಹಿರಂಗಪಡಿಸದಂತೆ ಡಿಹೆಚ್‍ಓ ತಿಳಿಸಿದರು. ವಿದೇಶದಿಂದ ಬಂದ ವ್ಯಕ್ತಿಗಳಲ್ಲಿ ತೀವ್ರ ಜ್ವರ, ನೆಗಡಿ, ಕೆಮ್ಮು, ಉಸಿರಾಟದ ಸಮಸ್ಯೆಯಿದ್ದಲ್ಲಿ ಜಿಲ್ಲಾ ಸವೇಕ್ಷಣಾ ಘಟಕದ ದೂ.ಸಂ. 0820-2525561 ಗೆ ಮಾಹಿತಿ ನೀಡುವಂತೆ ಹಾಗೂ ಈ ಕುರಿತು ವೈದ್ಯಕೀಯ ಪರೀಕ್ಷೆಗೆ ಆಗಮಿಸುವಾಗ ಖಾಸಗಿ ವಾಹನ ಅಥವಾ ಬಸ್ ಮುಂತಾದ ಸಾರ್ವಜನಿಕ ವಾಹನ ಬಳಸದಂತೆ ತಿಳಿಸಿದ ಡಾ. ಸೂಡಾ,
ಅರೋಗ್ಯ ಇಲಾಖೆಯಲ್ಲಿ ಇದಕ್ಕಾಗಿಯೇ ಪ್ರತ್ಯೇಕ ಸುಸಜ್ಜಿತ ವಾಹನವಿದ್ದು, ಆ ವಾಹನವನ್ನು ಶಂಕಿತರ ಮನೆಗೆ ಕಳುಹಿಸಿ, ಅದೇ ವಾಹನದಲ್ಲಿ ಕರೆ ತಂದು ಅಗತ್ಯ ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಇದುವರೆಗೂ ಯಾವುದೇ ಕೊರೊನಾ (ಕೋವಿಡ್-19) ಕೇಸ್‍ಗಳು ಪತ್ತೆಯಾಗಿಲ್ಲ. ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ದಾಖಲಾಗಿರುವ ಸಾಗರ ತಾಲೂಕಿನ ಮಹಿಳೆಯಲ್ಲಿ ಕೊರೊನಾ ರೋಗದ ಸೋಂಕು ಇಲ್ಲ ಎಂದು ವೈದ್ಯಕೀಯ ವರದಿ ಬಂದಿದ್ದು, ಮಹಿಳೆಗೆ ವಯೋಸಹಜ ಇತರೆ ಆರೋಗ್ಯ ಸಮಸ್ಯೆಗಳಿಂದ ದಾಖಲಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.
Thank god