ಯಡಿಯೂರಪ್ಪ ಸಿಎಂ ಪ್ರಮಾಣ ವಚನ ಸ್ವೀಕರಿಸಿದ ನಂತರ ಅತ್ರಪ್ತರು ವಾಪಸು?

ಬೆಂಗಳೂರು: ಸಮ್ಮಿಶ್ರ ಸರ್ಕಾರ ಉರುಳಲು ಕಾರಣರಾದ ಕಾಂಗ್ರೆಸ್-ಜೆಡಿಎಸ್‍ನ ಪಕ್ಷದ 12 ಮಂದಿ ಶಾಸಕರು ಸರ್ಕಾರ ಬೀಳುವವರೆಗೆ ವಾಪಸ್ ಬರಲ್ಲ ಎಂದು ಸ್ಪಷ್ಟಪಡಿಸಿದ್ದರು. ಸದ್ಯ ವಿಶ್ವಾಸಮತ ಪ್ರಕ್ರಿಯೆ ಪೂರ್ಣಗೊಂಡಿರುವ ಪರಿಣಾಮ ಇಂದು ಆದರೂ ಬೆಂಗಳೂರಿಗೆ ವಾಪಸ್ ಆಗುತ್ತಾರಾ ಎಂಬ ಕುತೂಹಲ ಮೂಡಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಅತೃಪ್ತ ಶಾಸಕರಿಗೆ ಸಂದೇಶ ರವಾನಿಸಿದ್ದಾರೆ. ಪ್ರಮಾಣವಚನ ಸ್ವೀಕರಿಸಿ ಬಹುಮತ ಸಾಬೀತುಪಡಿಸುವವರೆಗೆ ಬೆಂಗಳೂರಿಗೆ ಬಾರದಂತೆ ಬಂಡಾಯ ಶಾಸಕರಿಗೆ ಸೂಚಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಮಂಗಳವಾರಷ್ಟೇ ವಿಶ್ವಾಸಮತ ಪ್ರಕ್ರಿಯೆ ಮುಗಿದಿರುವ ಹಿನ್ನೆಲೆಯಲ್ಲಿ ವಿಶ್ವಾಸಮತ ಸಾಬೀತಿಗೆ ಸೂಚಿಸುವಂತೆ ಕೋರಿ ಸುಪ್ರೀಂ ಕೋರ್ಟಿಗೆ ಪಕ್ಷೇತರ ಶಾಸಕರು ಸಲ್ಲಿಸಿರುವ ಅರ್ಜಿ ಇವತ್ತು ಇತ್ಯರ್ಥವಾಗಲಿದೆ.
ಬಹುಮತ ಸಾಬೀತು ಪಡಿಸುವ ಮುನ್ನ ಪಕ್ಷದ ನಾಯಕರು, ವಾಪಸ್ ಬರುವಂತೆ ಆಹ್ವಾನ ನೀಡಿದ್ದರೂ ರೆಬೆಲ್ ಶಾಸಕರು ಅವರ ಮಾತನ್ನು ನಿರಾಕರಿಸಿದ್ದರು. ಅಲ್ಲದೆ ವಿಡಿಯೋ ಬಿಡುಗಡೆ ಮಾಡಿ ತಾವು ಯಾವುದೇ ಕಾರಣಕ್ಕೂ ಮತ್ತೆ ವಾಪಸ್ ಬರುವ ಯೋಚನೆ ಇಲ್ಲ, ಯಾರೇ ಸಿಎಂ ಆದರೂ ನಾವು ವಾಪಸ್ ಬರಲ್ಲ ಎಂದಿದ್ದರು. ಇತ್ತ ಅತೃಪ್ತ ಶಾಸಕರ ವಿಚಾರಣೆಗಾಗಿ ಸ್ಪೀಕರ್ ಅವರು ಭೇಟಿಗೆ ಅವಕಾಶ ನೀಡಿದ್ದರು. ಆದರೆ ಶಾಸಕರು ತಮ್ಮ ಪರ ವಕೀಲರ ಮೂಲಕ ಸಮಯಾವಕಾಶ ಕೇಳಿರುವುದರಿಂದ ಹೆಚ್ಚಿನ ಸಮಯದ ಅವಕಾಶ ಲಭಿಸಿದೆ.

Leave a Reply

Your email address will not be published. Required fields are marked *

error: Content is protected !!