‘ಲಿಂಗಾಯತರು ಹಿಂದೂಗಳು’ ಚರ್ಚೆ: ಪೇಜಾವರ ಶ್ರೀ ಸಾಣೇಹಳ್ಳಿಗೆ ಬರಲಿ

ಉಡುಪಿ : ‘ಲಿಂಗಾಯತರು ಹಿಂದೂಗಳು’ ಎಂಬ ಚರ್ಚೆಗೆ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ನೀಡಿದ ಪಂಥಾಹ್ವಾನಕ್ಕೆ ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಮ್ಮತಿ ಸೂಚಿಸಿದ್ದಾರೆ.
‘ಬಹಿರಂಗವಾಗಿ ಚರ್ಚಿಸಿ ತೀರ್ಮಾನಿಸುವ ವಿಚಾರ ಇದಲ್ಲ. ಪೇಜಾವರ ಶ್ರೀ ಪಂಥಾಹ್ವಾನ ನೀಡಿರುವುದು ವ್ಯರ್ಥ ಪ್ರಲಾಪ. ಚರ್ಚೆ ಮಾಡುವ ಕುತೂಹಲ ಶ್ರೀಗಳಲ್ಲಿ ಇದ್ದರೆ
ಸಾಣೇಹಳ್ಳಿಯ ಮಠಕ್ಕೆ ಬರಲಿ. ‘ಮತ್ತೆ ಕಲ್ಯಾಣ’ ಅಭಿಯಾನದ ಬಳಿಕ ಚರ್ಚೆಗೆ ಸಿದ್ಧರಿದ್ದೇವೆ’ ಎಂದು ಸಾಣೇಹಳ್ಳಿ ಶ್ರೀ ಪ್ರತಿಕ್ರಿಯಿಸಿದ್ದಾರೆ.
‘ಬಸವಣ್ಣನವರಿಂದ ಪ್ರತಿಪಾದಿತವಾದ ‘ಲಿಂಗಾಯತ’ ಧರ್ಮ ಹಿಂದೂ ಧರ್ಮದ ಪರಿಧಿಯಲ್ಲಿ ಬರುವುದಿಲ್ಲ ಎಂದು 40 ವರ್ಷಗಳಿಂದ ಪ್ರತಿಪಾದನೆ ಮಾಡುತ್ತ ಬಂದಿದ್ದೇವೆ. ಇದಕ್ಕೆ ಬಸವಾದಿ ಶಿವಶರಣರ ವಚನ ಸಾಹಿತ್ಯವೇ ಆಧಾರ. ‘ಹಿಂದೂ’ ಎಂಬ ಪದವೇ ಅನೇಕ ಗೊಂದಲಕ್ಕೆ ಕಾರಣವಾಗಿದೆ. ಅದೊಂದು ಧರ್ಮವೇ ಅಥವಾ ದೇಶವ್ಯಾಪಿ ಪದವೇ ಎಂಬುದೇ ಇತ್ಯರ್ಥವಾಗಿಲ್ಲ’ ಎಂದು ಸ್ವಾಮೀಜಿ ಪ್ರತಿಪಾದಿಸಿದ್ದಾರೆ.
‘ಹಿಂದೂ’ ಎಂಬುದು ‘ಧರ್ಮ’ ಎನ್ನುವುದಾದರೆ ಬಸವ ಪರಂಪರೆಯನ್ನು ಅಪ್ಪಿಕೊಂಡವರು ಎಂದಿಗೂ ಹಿಂದೂಗಳಾಗಲು ಸಾಧ್ಯವಿಲ್ಲ. ವೇದ-ಶಾಸ್ತ್ರ-ಪುರಾಣ, ಜಾತೀಯತೆ, ಲಿಂಗ ತಾರತಮ್ಯ, ಮೌಢ್ಯ, ಅಸಮಾನತೆಗಳನ್ನು ಬಸವ ಪರಂಪರೆ ಒಪ್ಪುವುದಿಲ್ಲ. ನಾವು ಪೂಜಿಸುವ ‘ಶಿವ’ ಪೌರಾಣಿಕ ವ್ಯಕ್ತಿಯಲ್ಲ. ‘ಇಷ್ಟಲಿಂಗ’ ನಮ್ಮ ಆರಾಧ್ಯ ದೇವರು’ ಎಂದು ಅಭಿಪ್ರಾಯಪಟ್ಟಿದ್ದಾರೆ.

Leave a Reply

Your email address will not be published. Required fields are marked *

error: Content is protected !!