ಎಚ್ ಡಿಕೆ ಪೂರ್ಣ ವಿಡಿಯೋ ಯಾಕೆ ಬಿಡುಗಡೆ ಮಾಡಲಿಲ್ಲ: ಕೋಟ

ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪೂರ್ಣ ವಿಡಿಯೋ ಯಾಕೆ ಬಿಡುಗಡೆ ಮಾಡಲಿಲ್ಲ ಎಂಬುದೇ ನನ್ನ ಆತಂಕ ಎಂದು ಮೀನುಗಾರಿಕೆ ಮತ್ತು ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.

ನಗರದ ಹೊರವಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕುಮಾರಸ್ವಾಮಿ ಅವರ ಹಿರಿತನದ ಬಗ್ಗೆ ನನಗೆ ಗೌರವವಿದೆ. ಆದರೆ ಗಲಭೆ ಆರಂಭವಾದಾಗ ಯಾವ ಯಾವ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಸಮರ್ಪಕವಾದ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದೆ ಎಂದು ತಿರುಗೇಟು ನೀಡಿದ್ದಾರೆ.

ಮುಗ್ದರು, ಅಮಾಯಾಕರು ಎನ್ನುವ ನಿಮ್ಮ ಶಬ್ದದಲ್ಲಿ ಕಲ್ಲು ಹೊಡೆಯುವವರು, ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಹೊಡೆಯುವವರು ಬರುತ್ತಾರಾ? ಈ ಬಗ್ಗೆ ನನಗೆ ಜಿಜ್ಞಾಸೆ ಇದೆ. ಶಸ್ತ್ರಾಗಾರದ ಬೀಗ ಹೊಡೆದು, ಪೊಲೀಸರ ಮೇಲೆ ಕಲ್ಲು ತೂರುವವವರು ಅಮಾಯಕರೇ ಎಂದು ಸಚಿವರು ಪ್ರಶ್ನಿಸಿದರು.

ಮಂಗಳೂರು ಗಲಭೆ ಪ್ರಕರಣದಲ್ಲಿ ಸರ್ಕಾರ ಪಾರದರ್ಶಕವಾಗಿದೆ. ನಿಷ್ಪಕ್ಷಪಾತವಾದ ತನಿಖೆ ನಡೆಯುತ್ತಿದೆ. ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಸರ್ಕಾರ ಹಾಗೂ ವಿಪಕ್ಷ ಎರಡಕ್ಕೂ ಇದೆ ಎಂದು ತಿಳಿಸಿದರು.

ಏನೇ ದೂರುಗಳಿದ್ದರೂ ಸರ್ಕಾರಕ್ಕೆ ಅದನ್ನು ಕೊಟ್ಟರೆ ತನಿಖಾಧಿಕಾರಿಗಳು ತನಿಖೆ ನಡೆಸುತ್ತಾರೆ. ತನಿಖೆ ಸಹ ಆರಂಭವಾಗಿದೆ. ನಿಗದಿತ ಸಮಯದಲ್ಲಿ ವರದಿ ನೀಡುತ್ತಾರೆ. ಕುಮಾರಸ್ವಾಮಿ ಅವರೇ ಸಿಎಂ ಆಗಿದ್ದಾಗ ನಾನು ವಿಪಕ್ಷ ನಾಯಕನಾಗಿ ಕೆಲಸ ಮಾಡಿದ್ದೇನೆ. ಸಮಾಜದ ಶಾಂತಿ-ಸುವ್ಯವಸ್ಥೆ ಕಾಪಾಡುವುದು ಆಡಳಿತ ಹಾಗೂ ವಿಪಕ್ಷದ ಜವಾಬ್ದಾರಿಯಾಗಿದ್ದು, ಒಬ್ಬ ಮಾಜಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದವರು ಹೀಗೆ ಹೇಳುವುದು ಸರಿಯಲ್ಲ ಎಂದು ತಿರುಗೇಟು ನೀಡಿದರು.

ದಕ್ಷಿಣ ಕನ್ನಡ ಜಿಲ್ಲೆ ಉಸ್ತುವಾರಿ ನಾನೇ ಆಗಿದ್ದು, ಅವರ ಗೊಂದಲ ಬಗೆಹರಿಸಲು ನ್ಯಾಯಾಂಗ ತನಿಖೆ ಮಾಡಲಾಗುತ್ತಿದೆ. ಯಾರೇ ತಪ್ಪು ಮಾಡಿದ್ದರೂ ಅವರ ವಿರುದ್ಧ ಸರ್ಕಾರ ಕ್ರಮಕೈಗೊಳ್ಳಲಿದೆ ಎಂದರು.

Leave a Reply

Your email address will not be published. Required fields are marked *

error: Content is protected !!