ಏನಿದು ಆರ್ಟಿಕಲ್ 370, 35(ಎ) ,ಯಾಕೆ ಜಾರಿಗೆ ಬ೦ತು…
35(ಎ) ವಿಧಿಯಲ್ಲಿರುವ ಸವಲತ್ತುಗಳೇನು?
ರಾಜ್ಯದ ಶಾಶ್ವತ ನಿವಾಸಿಗಳು ಮತ್ತು ಅವರ ಹಕ್ಕುಗಳ ಬಗ್ಗೆ ಸ್ವತಂತ್ರ್ಯ ನಿರ್ಧಾರ ಕೈಗೊಳ್ಳುವ ನಿರ್ಧಾರವನ್ನು ಈ ವಿಧಿ ಜಮ್ಮು-ಕಾಶ್ಮೀರ ಸರ್ಕಾರಕ್ಕೆ ನೀಡುತ್ತದೆ. 1954ರಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಜವಾಹರಲಾಲ್ ನೆಹರೂ ನೇತೃತ್ವದ ಸರ್ಕಾರದ ಸಲಹೆ ಮೇರೆಗೆ ಆಗಿನ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಸಾಂವಿಧಾನಿಕ ಆದೇಶದ ಮೂಲಕ ಈ ವಿಧಿಯನ್ನು ಸಂವಿಧಾನಕ್ಕೆ ಸೇರಿಸಿದರು.
1956ರಲ್ಲಿ ಜಮ್ಮು-ಕಾಶ್ಮೀರಕ್ಕಾಗಿ ಪ್ರತ್ಯೇಕ ಸಂವಿಧಾನವನ್ನು ರಚಿಸಲಾಗಿದ್ದು, ಇದು ರಾಜ್ಯದ ಶಾಶ್ವತ ನಿವಾಸಿಗಳನ್ನು ನಿರ್ಧರಿಸುತ್ತದೆ. ಈ ವಿಧಿಯ ಪ್ರಕಾರ 1954 ಮೇ 14ಕ್ಕೂ ಮುನ್ನ ರಾಜ್ಯದಲ್ಲಿ ನೆಲೆಸಿದವರು ಅಥವಾ ಕಳೆದ 10 ವರ್ಷಗಳಿಂದ ರಾಜ್ಯದಲ್ಲಿ ನೆಲೆಸಿದ್ದು, ಕಾನೂನು ಬದ್ಧವಾಗಿ ಸ್ಥಿರಾಸ್ತಿ ಹೊಂದಿರುವವರಿಗಷ್ಟೇ ರಾಜ್ಯದ ಶಾಶ್ವತ ನಿವಾಸಿ ಹಕ್ಕು ದೊರೆಯುತ್ತದೆ.
ಈ ವಿಧಿಯ ಪ್ರಕಾರ ಹೊರ ರಾಜ್ಯದವರು ಜಮ್ಮು-ಕಾಶ್ಮೀರದಲ್ಲಿ ಆಸ್ತಿ ಖರೀದಿಸಲು ಅಥವಾ ಸರ್ಕಾರಿ ಉದ್ಯೋಗ ಹೊಂದಲು ಅವಕಾಶವಿಲ್ಲ. 35 (ಎ) ವಿಧಿಯ ಮೂಲ ನಿಯಮವು ಮಹಿಳೆಯರ ವಿಚಾರದಲ್ಲಿ ತಾರತಮ್ಯ ಹೊಂದಿದ್ದು, ಅದರ ಪ್ರಕಾರ ಹೊರ ರಾಜ್ಯದ ವ್ಯಕ್ತಿಯನ್ನು ವಿವಾಹವಾಗುವ ಜಮ್ಮು-ಕಾಶ್ಮೀರ ಮಹಿಳೆ ಶಾಶ್ವತ ನಿವಾಸಿ ಹಕ್ಕನ್ನು ಕಳೆದುಕೊಳ್ಳುತ್ತಾಳೆ. ಆದರೆ ಪರುಷರು ಬೇರೆ ರಾಜ್ಯದ ಮಹಿಳೆಯನ್ನು ವಿವಾಹವಾದರೆ ಆ ಪುರಷನ ಹಕ್ಕಿಗೆ ಯಾವುದೇ ಧಕ್ಕೆ ಆಗುವುದಿಲ್ಲ. 2002 ರಲ್ಲಿ ಜಮ್ಮು-ಕಾಶ್ಮೀರ ಹೈಕೋರ್ಟ್ ಐತಿಹಾಸಿಕ ತೀರ್ಪಿನಲ್ಲಿ ಇಂತಹ ಹಕ್ಕುನ್ನು ಮಹಿಳೆ ಕಳೆದುಕೊಳ್ಳುವುದಿಲ್ಲ. ಆದರೆ ಈ ದಂಪತಿಗೆ ಜನಿಸುವ ಮಕ್ಕಳಿಗೆ ಶಾಶ್ವತ ನಿವಾಸಿ ಹಕ್ಕು ಇರುವುದಿಲ್ಲ ಎಂದು ತೀರ್ಪು ನೀಡಿತ್ತು.
35 (ಎ) ವಿಧಿಯ ಬಗ್ಗೆ ಆಕ್ಷೇಪಗಳು
ಸಂವಿಧಾನಕ್ಕೆ 35 (ಎ) ವಿಧಿಯನ್ನು ಏಕಾಏಕಿ ಸೇರ್ಪಡೆ ಮಾಡಲಾಗಿದ್ದು, ಇದರ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆದು, ಪಾರ್ಲಿಮೆಂಟಿನ ಅಂಗೀಕಾರ ಪಡೆದುಕೊಂಡಿಲ್ಲ. ಹೀಗಾಗಿ ಇದನ್ನು ರದ್ದು ಪಡಿಸಬೇಕೆಂದು ವಿ.ದಿ ಸಿಟಿಜನ್ಸ್ ಎಂಬ ಎನ್ಜಿಒ 2014 ರಲ್ಲಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ.
ರಾಜ್ಯದ ಮಹಿಳೆಯರು ಹೊರ ರಾಜ್ಯದವರನ್ನು ಮದುವೆಯಾದರೆ ಅಂತಹವರ ಮಕ್ಕಳಿಗೆ ಶಾಶ್ವತ ನಿವಾಸಿ ಹಕ್ಕು ಕಿತ್ತುಕೊಳ್ಳುವ 35 (ಎ) ವಿಧಿಯನ್ನು ರದ್ದು ಮಾಡಬೇಕು ಎಂದು ಜಮ್ಮು – ಕಾಶ್ಮೀರದ ಇಬ್ಬರು ಮಹಿಳೆಯರು ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಹಾಕಿದ್ದರು.
370 ನೇ ವಿಧಿ ಪ್ರಕಾರ ಕಾಶ್ಮೀರಕ್ಕೆ ವಿಶೇಷ ಅಧಿಕಾರ
370 ಭಾರತ ಸಂವಿಧಾನದ ಈ ವಿಧಿಯು ಜಮ್ಮು- ಕಾಶ್ಮೀರಕ್ಕೆ ವಿಶೇಷ ಸ್ವಾಯತ್ತತೆಯನ್ನು ಕಲ್ಪಿಸುತ್ತದೆ. ಇದರ ಅಡಿಯಲ್ಲಿ ಜಮ್ಮು – ಕಾಶ್ಮೀರದಲ್ಲಿ ರಕ್ಷಣೆ, ವಿದೇಶಾಂಗ ವ್ಯವಹಾರ ಹಾಗೂ ಸಂವಹನ ಈ ಮೂರು ಕ್ಷೇತ್ರಗಳನ್ನು ಹೊರತು ಪಡಿಸಿ, ಬೇರೆ ಯಾವುದೇ ಕಾನೂನು ಜಾರಿಗೊಳಿಸುವ ಮುನ್ನ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದ ಅನುಮತಿ ಪಡೆಯಬೇಕು.ಯುದ್ಧ, ಬಾಹ್ಯ ಆಕ್ರಮಣ ಹೊರತಾಗಿ ಬೇರೆ ಯಾವುದೇ ಸಂದರ್ಭದಲ್ಲಿ ಜಮ್ಮು-ಕಾಶ್ಮೀರದಲ್ಲಿ ತುರ್ತು ಪರಿಸ್ಥಿತಿ ಹೇರಲು ಕೇಂದ್ರಕ್ಕೆ ಅಧಿಕಾರವಿಲ್ಲ. ಆಂತರಿಕ ಗಲಭೆ, ರಾಜಕೀಯ ಅಸ್ಥಿರತೆ ಮುಂತಾದ ಸಂದರ್ಭಗಳಲ್ಲಿ ರಾಜ್ಯ ಸರ್ಕಾರದ, ರಾಜ್ಯಪಾಲರ ಮನವಿ ಅಥವಾ ಸೂಚನೆ ಮೇರೆಗೆ ಮಾತ್ರ ತುರ್ತು ಪರಿಸ್ಥಿತಿ ಹೇರಬಹುದು.