ನಾಪತ್ತೆಯಾದವ ಸತ್ತನೆಂದು ಆರಾಧನೆ ನಡೆದ ಮೇಲೆ ಪ್ರತ್ಯಕ್ಷವಾದರೆ ಹೇಗಿರಬಹುದು!!

ಹಾಸನ: ನಾಪತ್ತೆಯಾಗಿದ್ದ ವ್ಯಕ್ತಿ ಸತ್ತಿದ್ದಾನೆ ಎಂದು ತಿಳಿದು ಅಂತ್ಯಕ್ರಿಯೆ ನೆರವೇರಿಸಿ, 11ನೇ ದಿನದ ಆರಾಧನಾ ಕಾರ್ಯವನ್ನೂ ಮುಗಿಸಲಾಗಿತ್ತು. ಆದರೆ ಈಗ ಆ ವ್ಯಕ್ತಿ ದಿಢೀರ್ ಪ್ರತ್ಯಕ್ಷವಾಗಿದ್ದಾನೆ.

ದುಃಖತಪ್ತರಾಗಿದ್ದ ವ್ಯಕ್ತಿಯ ಮನೆಯವರಲ್ಲಿ ಸಂತಸ ಮರಳಿ ಬಂದಿದ್ದರೆ, ಗ್ರಾಮಸ್ಥರು ಮತ್ತು ಸಂಬಂಧಿಕರಲ್ಲಿ ಅಚ್ಚರಿ ಮನೆ ಮಾಡಿದೆ. ಅಂತ್ಯಕ್ರಿಯೆ ನಡೆಸಿದ ವ್ಯಕ್ತಿ ಯಾರು ಎನ್ನುವ ಗೊಂದಲ ಶುರುವಾಗಿದೆ.
ತಾಲ್ಲೂಕಿನ ಶಂಖ ಗ್ರಾಮದ ನಿವಾಸಿ, ಕೃಷಿ ಕೆಲಸ ಮಾಡಿದ್ದ ಶಿವಣ್ಣ, 20 ದಿನಗಳ ಹಿಂದೆ ಪತ್ನಿಯೊಂದಿಗೆ ಜಗಳವಾಡಿಕೊಂಡು ಮನೆ ಬಿಟ್ಟು ಹೋಗಿದ್ದರು. ಇದಾದ ನಂತರ ಆತಂಕಗೊಂಡ ಶಿವಣ್ಣನ ಪತ್ನಿ, ದೀಪಾ ಹಾಸನ ಗ್ರಾಮಾಂತರ ಠಾಣೆಗೆ ನಾಪತ್ತೆ ಪ್ರಕರಣ ದಾಖಲಿಸಿದ್ದರು.


ಪ್ರಕರಣ ದಾಖಲಾದ ಕೆಲವೇ ದಿನಗಳಲ್ಲಿ ಹಾಸನದ ಹೊಸ ಬಸ್ ನಿಲ್ದಾಣದ ಬಳಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿತ್ತು. ಕಾಣೆಯಾಗಿದ್ದ ಶಿವಣ್ಣನ ಹೋಲಿಕೆಯನ್ನೇ ಮೃತದೇಹ ಹೋಲುತ್ತಿದ್ದುದರಿಂದ ಪೊಲೀಸರು, ದೀಪಾಳಿಗೆ ಕರೆ ಮಾಡಿ ಕರೆಸಿದರು. ಮೃತದೇಹದ ಮೈಮೇಲಿದ್ದ ಉಡುಪು ನೋಡಿದ ದೀಪಾ, ‘ಇವರು ನನ್ನ ಪತಿಯಲ್ಲ’ ಎಂದಿದ್ದರು. ಆದರೆ ದೇಹದ ಮುಖಭಾಗ ಸಂಪೂರ್ಣ ಕೊಳೆತು ಹೋಗಿದ್ದರಿಂದ ಒಲ್ಲದ ಮನಸ್ಸಿನಿಂದಲೇ ಮೃತದೇಹವನ್ನು ಸ್ವಗ್ರಾಮಕ್ಕೆ ಕೊಂಡೊಯ್ದು ಅಂತ್ಯಕ್ರಿಯೆ ನೆರವೇರಿಸಿದ್ದರು.


ಇದೆಲ್ಲಾ ಮುಗಿದ ನಂತರ ಬೆಂಗಳೂರಿನ ಸಂಬಂಧಿಕರ ಮನೆಯಲ್ಲಿ ಕಾಣಿಸಿಕೊಂಡ ಶಿವಣ್ಣನನ್ನು ಊರಿಗೆ ಕರೆದುಕೊಂಡು ಬಂದಿದ್ದಾರೆ. ‘ನನ್ನ ಪತಿ ಸತ್ತಿಲ್ಲ ಎಂಬ ನಂಬಿಕೆ ಇತ್ತು. ಅಂದು ಪೊಲೀಸರಿಗೆ ಮೃತದೇಹ ಪತಿಯದಲ್ಲ ಎಂದು ಹೇಳಿದ್ದರೂ ಕೇಳಲಿಲ್ಲ. ಒಲ್ಲದ ಮನಸ್ಸಿನಿಂದಲೇ ತಂದು ಅಂತ್ಯಕ್ರಿಯೆ ನೆರವೇರಿಸಲಾಯಿತು’ ಎಂದು ಶಿವಣ್ಣನ ಪತ್ನಿ ದೀಪಾ ತಿಳಿಸಿದರು.


‘ಬೇಜಾರಾಗಿ ನಾಲ್ಕು ದಿನ ಹೊರಗೆ ಇದ್ದು ಬರೋಣ ಎಂದು ಮನೆ ಬಿಟ್ಟು ಹೋಗಿದ್ದೆ. ಮೊದಲು ತುಮಕೂರಲ್ಲಿ ಹೋಟೆಲ್ ಸೇರಿದೆ. ಅಲ್ಲಿ ವಾತಾವರಣ ಹಿಡಿಸದ ಕಾರಣ ಬೆಂಗಳೂರಿನ ಸಂಬಂಧಿಕರ ಮನೆಗೆ ಹೋಗಿದ್ದೆ’ ಎಂದು ಬದುಕಿ ಬಂದ ಶಿವಣ್ಣ ಹೇಳಿದರು. ಕೊಳೆತ ಸ್ಥಿತಿಯಲ್ಲಿ ಸಿಕ್ಕ ಮೃತದೇಹ ಯಾರದ್ದು ಎಂಬುದರ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!