ಅತೃಪ್ತರ ವಿರುದ್ಧ ಯಾವ ಕ್ರಮ ಕೈಗೊಳ್ಳಬಹುದು – ಸ್ಪೀಕರ್ ಕಚೇರಿಯಲ್ಲಿ ದೋಸ್ತಿಗಳಿಂದ ಚರ್ಚೆ

ಬೆಂಗಳೂರು: ಅತೃಪ್ತ ಶಾಸಕರ ವಿರುದ್ಧ ಕ್ರಮ ಕೈಗೊಳ್ಳಲೇಬೇಕೆಂದು ಮೈತ್ರಿ ನಾಯಕರು ತೀರ್ಮಾನಿಸಿದ್ದು, ಕೋರ್ಟ್ ಬಿಗ್ ರಿಲೀಫ್ ನೀಡಿದ ಹಿನ್ನೆಲೆಯಲ್ಲಿ ಸದನದ ಮೂಲಕ ಕ್ರಮ ಕೈಗೊಳ್ಳಬಹುದೇ ಎಂಬ ದಾರಿಯನ್ನು ಹುಡುಕುತ್ತಿದ್ದಾರೆ.

ಈ ಸಂಬಂಧ ದೋಸ್ತಿ ನಾಯಕರು ಸ್ಪೀಕರ್ ರಮೇಶ್ ಕುಮಾರ್ ಜೊತೆ ಚರ್ಚೆ ನಡೆಸಿ ಮಾತನಾಡಿದ್ದಾರೆ. ಸ್ಪೀಕರ್ ಭೇಟಿಯ ಬಳಿಕ ಸಚಿವ ಕೃಷ್ಣಭೈರೇಗೌಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸದನದಿಂದ ಹೊರಗುಳಿದರೆ ಕ್ರಮ ಕೈಗೊಳ್ಳಲು ಸಾಧ್ಯವಿದೆಯೇ? ಶಾಸಕಾಂಗ ಪಕ್ಷದ ನಿರ್ದೇಶನ ಉಲ್ಲಂಘಿಸಿದ್ದಕ್ಕೆ ಕ್ರಮ ಕೈಗೊಳ್ಳಬಹುದೇ ಎನ್ನುವುದರ ಕುರಿತು ಸ್ಪಷ್ಟೀಕರಣ ಪಡೆಯಲು ಸ್ಪೀಕರ್ ಭೇಟಿಯಾಗಿದ್ದೆವು ಎಂದು ಸ್ಪಷ್ಟಪಡಿಸಿದರು.

ಸದನದಲ್ಲಿ ಭಾಗವಹಿಸಬೇಕೋ? ಬೇಡವೋ ಎನ್ನುವುನ್ನು ಕೋರ್ಟ್ ಶಾಸಕರ ವಿವೇಚನೆ ಬಿಟ್ಟಿದೆ. ಈ ಮೂಲಕ ಸುಪ್ರೀಂ ಕೋರ್ಟ್ ನಾವು ವಾದ ಮಂಡಿಸಲು ಅವಕಾಶವನ್ನೂ ನೀಡದೇ ನಮ್ಮನ್ನು ವಿಚಾರಣೆಗೂ ಕರೆಯದೆ, ತೀರ್ಪು ನೀಡಿ ನಮ್ಮ ಹಕ್ಕುಗಳನ್ನು ಕಟ್ಟಿ ಹಾಕಿದೆ ಎಂದರು.
ವಿಪ್ ಜಾರಿಗೊಳಿಸುವುದು ಶಾಸಕಾಂಗ ಪಕ್ಷಗಳ ಹಕ್ಕು. ಅಲ್ಲದೆ, ಶಾಸಕರು ಸದನದಲ್ಲಿ ಭಾಗವಹಿಸುವುದಕ್ಕೆ ವಿನಾಯಿತಿ ನೀಡುವುದು ಹಕ್ಕು ಕಿತ್ತುಕೊಂಡಂತೆ. ಸದನದ ಹೊರಗುಳಿದರೆ, ಕ್ರಮ ಕೈಗೊಳ್ಳುವ ನಿಯಮ ಸದನಲ್ಲಿದೆ. ಆ ಕ್ರಮಕ್ಕೆ ವಿನಾಯಿತಿ ಇದೆಯೇ ಎಂದು ಸ್ಪೀಕರ್ ಬಳಿ ಪ್ರಶ್ನಿಸಿದೆವು. ಇದಕ್ಕೆ ಸ್ಪೀಕರ್ ಉತ್ತರಿಸಿ, ಸದನದ ಹೊರಗುಳಿಯಬೇಕಿದ್ದರೆ ಸದನದ ಒಪ್ಪಿಗೆ ಪಡೆಯಬೇಕು. ಇಲ್ಲವೆ, ಸಭಾಧ್ಯಕ್ಷರ ಮೂಲಕ ಅನುಮತಿ ಪಡೆಯಬೇಕು ಎಂಬ ನಿಯಮ ಕರ್ನಾಟಕದಲ್ಲಿದೆ. ಇದಕ್ಕೂ ವಿನಾಯಿತಿ ನೀಡಲಾಗಿದೆಯೇ ಎಂದು ನಾವು ಪ್ರಶ್ನಿಸಿದ್ದೇವೆ. ಇದಕ್ಕೆ ಸ್ಪೀಕರ್ ಉತ್ತರಿಸಿ, ಹೊರಗುಳಿದರೆ ಸದನದ ಒಪ್ಪಿಗೆ ಪಡೆಯಲೇಬೇಕೆಂದು ತಿಳಿಸಿದ್ದಾರೆ ಎಂದು ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು.

ವಿಪ್ ಜಾರಿ ಕುರಿತು ಸಹ ಸ್ಪೀಕರ್ ಸ್ಪಷ್ಟಪಡಿಸಿದ್ದು, ನೀವು ನೀಡಿರುವ ಶಾಸಕಾಂಗ ಪಕ್ಷಗಳ ಹಕ್ಕುಗಳು ನಿಮ್ಮ ವಿವೇಚನೆಗೆ ಬಿಟ್ಟದ್ದು, ಅದರ ಕುರಿತು ನಾನು ಸ್ಪಷ್ಟೀಕರಣ ನೀಡಲು ಸಾಧ್ಯವಿಲ್ಲ. ಆದರೆ, ನಿಮಗಿರುವ ಹಕ್ಕುಗಳ ಪ್ರಕಾರ, ನಿಮ್ಮ ನಿರ್ದೇಶನ ಉಲ್ಲಂಘನೆಯಾಗಿದ್ದಲ್ಲಿ ಸಂವಿಧಾನದ 10ನೇ ಶೆಡ್ಯೂಲ್ ಪ್ರಕಾರ, ಶಾಸಕಾಂಗ ಪಕ್ಷಗಳು ನನಗೆ ಅರ್ಜಿ ಸಲ್ಲಿಸಿದರೆ, ಕರೆದು ವಿಚಾರಣೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಸ್ಪಷ್ಟಪಡಿಸಿದ್ದಾರೆ ಎಂದು ತಿಳಿಸಿದರು.
ಅತೃಪ್ತ ಶಾಸಕರ ವಿರುದ್ಧ ಏನು ನಿರ್ಧಾರ ಕೈಗೊಳ್ಳಬೇಕು ಎನ್ನುವುದರ ಬಗ್ಗೆ ಪಕ್ಷಗಳು ಸಭೆ ನಡೆಸಿ ನಾಳೆಯೊಳಗೆ ನಿರ್ಧಾರ ಕೈಗೊಳ್ಳುತ್ತವೆ. ವಿಪ್ ನೀಡುವ ಕುರಿತು ಪಕ್ಷದ ಮಟ್ಟದಲ್ಲಿ ತೀರ್ಮಾನ ಮಾಡಲಾಗುವುದು. ಇಲ್ಲಿಯವರೆಗೆ ಚರ್ಚೆ ನಡೆದ ಪ್ರಕಾರ ವಿಪ್ ನೀಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು

Leave a Reply

Your email address will not be published. Required fields are marked *

error: Content is protected !!