ಜಿ.ಪಂ.ಅಧ್ಯಕ್ಷರ ಮನೆಯ ಮುಂದೆ ಧರಣಿ ನಡೆಸುತ್ತೇವೆ: ಭಾಸ್ಕರ್ ಪ್ರಸಾದ್
ಉಡುಪಿ: ಪಂಚಾಯತ್ ವ್ಯಾಪ್ತಿಯಲ್ಲಿ ಜನವಿರೋಧಿ ಫಿಶ್ ಮಿಲ್ ಪ್ರಾರಂಭಿಸಿ ಜನರು ಉದ್ಯಾವರದಲ್ಲಿ ಪರಿಸರ ಮಾಲಿನ್ಯದಿಂದಾಗಿ ವಾಸಿಸುವುದೇ ಕಷ್ಟವಾಗಿತ್ತು. ಈಗ ಮತ್ತೆ ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಜನವಿರೋಧಿ ಕೈಗಾರಿಕಾ ವಲಯಕ್ಕೆ ಅನುಮತಿ ನೀಡಿರುವುದನ್ನು ಖಂಡಿಸಿ ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಸೋಮವಾರ ಗ್ರಾಮ ಪಂಚಾಯತ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾಜಿ ಸಚಿವ, ಶಾಸಕ ವಿನಯ್ ಕುಮಾರ್ ಸೊರಕೆ ಮಾತನಾಡಿ ಉದ್ಯಾವರ ಗ್ರಾಮ ಪಂಚಾಯತ್ ಕೈಗಾರಿಕಾ ವಲಯ ಭೂಪರಿವರ್ತನೆಗೆ ನಿರಾಪೇಕ್ಷಣಾ ಪತ್ರ ನೀಡಬಾರದು ಎಂದು ಗ್ರಾಮ ಸಭೆಯಲ್ಲಿ ನಿರ್ಣಯಿಸಿತ್ತು. ಈಗ ಮತ್ತೆ ಈ ಭಾಗದಲ್ಲಿ ಕೈಗಾರಿಕಾ ವಲಯಕ್ಕೆ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಭೂಪರಿವರ್ತನೆಗೆ ನಿರಾಪೇಕ್ಷಣಾ ಪತ್ರವನ್ನು ನೀಡಿದ್ದು ಇದರ ಹಿಂದೆ ಯಾರು ಇದ್ದಾರೆ ಎನ್ನುವುದು ಸ್ಪಷ್ಟಪಡಿಸಬೇಕು. ಜಿಲ್ಲಾ ಪಂಚಾಯತ್ ಅಧ್ಯಕ್ಷರು ಗ್ರಾಮದ ಜನರ ಭಾವನೆಗಳಿಗೆ ಬೆಲೆ ಕೊಟ್ಟು ನೀಡಿರುವ ನಿರಾಪೇಕ್ಷಣಾ ಪತ್ರವನ್ನು ಹಿಂಪಡೆಯಬೇಕು ಇಲ್ಲವಾದಲ್ಲಿ ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಭಾಸ್ಕರ್ ಪ್ರಸಾದ್, ಹಿಂದೊಮ್ಮೆ ಉದ್ಯಾವರದಲ್ಲಿ ಫಿಶ್ಮಿಲ್ ವಿರೋಧದ ಬಗ್ಗೆ ಪ್ರತಿಭಟನೆ ನಡೆದಾಗ ದಿನಕರ ಬಾಬು ಮುಂಚೂಣಿಯಲ್ಲಿ ನಿಂತಿದ್ದರು. ಆದರೆ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಕೂಡಲೇ ಕೈಗಾರಿಕಾ ವಲಯಕ್ಕೆ ಅವಕಾಶ ನೀಡಿರುವುದು ನೋಡಿದಾಗ ಇದರಲ್ಲಿ ಯಾವುದೋ ಆಮಿಷವಿದೆ ಎಂದು ತಿಳಿದು ಬರುತ್ತದೆ. ಇದು ಅಕ್ಷಮ್ಯ ಅಪರಾಧ. ಜಿಲ್ಲಾ ಪಂಚಾಯತ್ ಅಧ್ಯಕ್ಷರು ಆದಷ್ಟು ಬೇಗ ಈ ನಿರ್ಣಯವನ್ನು ಹಿಂದೆಗೆದುಕೊಳ್ಳಬೇಕು. ಇಲ್ಲದಿದ್ದರೆ ಪ್ರಮಾಣ ಮಾಡಿ ಹೇಳುತ್ತೇನೆ ನಿಮ್ಮ ಮನೆಯ ಮುಂದೆ ಧರಣಿ ಕುಳಿತು ಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ನ್ಯಾಯಾವಾದಿ ಕೆಪಿಸಿಸಿ ವಕ್ತಾರ ಸುಧೀರ್ ಮರೋಳಿ, ಕೆಪಿಸಿಸಿ ಕಾರ್ಯದರ್ಶಿ ಎಂ.ಎ ಗಫೂರ್ ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷರ ಸರ್ವಾಧಿಕಾರಿ ಮತ್ತು ಜನವಿರೋಧಿ ನಿಲುವನ್ನು ಖಂಡಿಸಿ ಮಾತನಾಡಿದರು.
ಪ್ರತಿಭಟನೆಯಲ್ಲಿ ಉದ್ಯಾವರ ಗ್ರಾ.ಪಂ. ಅಧ್ಯಕ್ಷೆ ಸುಗಂಧಿ ಶೇಖರ್, ಉಪಾಧ್ಯಕ್ಷ ರಿಯಾಝ್ ಪಳ್ಳಿ, ಕಾಂಗ್ರೆಸ್ ನಾಯಕರಾದ ಹರೀಶ್ ಕಿಣಿ, ನವೀನ್ ಚಂದ್ರ ಸುವರ್ಣ, ಪ್ರವೀಣ್ ಶೆಟ್ಟಿ, ಆನಂದ್, ನಾಗೇಶ್ ಕುಮಾರ್ ಉದ್ಯಾವರ, ಜಿತೇಂದ್ರ ಫುರ್ಟಾಡೋ, ಪ್ರಶಾಂತ್ ಜತ್ತನ್ನ, ಸುನೀಲ್ ಬಂಗೇರ ಮತ್ತು ಹಲವಾರು ಗ್ರಾಮ ಪಂಚಾಯತ್ ಸದಸ್ಯರು ಹಾಗೂ ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದರು.