ಸರಕಾರಕ್ಕೆ ನಾವೇನು ದ್ರೋಹ ಮಾಡಿದ್ದೇವೆ: ಚಿನ್ನ ಬೆಳ್ಳಿ ಕೆಲಸಗಾರರ ಅಳಲು
ಉಡುಪಿ: ಜಿಲ್ಲೆಯಲ್ಲಿ ಸುಮಾರು 6000 ಕುಟುಂಬ ಚಿನ್ನ ಬೆಳ್ಳಿ ಕೆಲಸವನ್ನು ಕುಲಕಸುಬಾಗಿ ಮಾಡಿಕೊಂಡು ಕಾರ್ಯ ನಿರ್ವಹಿಸುತ್ತಿದ್ದೇವೆ. ಸುಮಾರು ಹತ್ತು ವರ್ಷಗಳಿಂದ ನಮ್ಮ ಕೆಲಸ ಬಹಳ ಕಡಿಮೆಯಾಗಿದ್ದು, ಇದಕ್ಕೆ ಕಾರಣ ಹೊರರಾಜ್ಯಗಳಿಂದ ಬರುವ ರೆಡಿಮಂಡ್ ಆಭರಣಗಳು ಹಾಗೂ ಬಂಡವಾಳ ಶಾಹಿಗಳು, ಬಂಗಾಳಿ ಕೆಲಸಗಾರರಿಂದಾಗಿ ನಮ್ಮ ಕೆಲಸಗಾರರಿಗೆ ಕೆಲಸ ತುಂಬಾ ಕಡಿಮೆಯಾಗಿ ಜೀವನ ನಿರ್ವಹಿಸುವುದೇ ಕಷ್ಟಕರವಾಗಿದೆ.
ಕೊವಿಡ್ 19 ಕೋರೋನಾ ವೈರಸ್ ಮಹಾಮಾರಿಯಿಂದಾಗಿ ಮಾರ್ಚ್ 22 ರಿಂದ ಲಾಕ್ ಡೌನ್ ನಿಂದ ಪ್ರತಿಯೊಬ್ಬರೂ ಮನೆಯಲ್ಲೇ ಕುಳಿತಿರಬೇಕಾದ ಪರಿಸ್ಥಿತಿ ಬಂದಿದೆ. ಮೊದಲೇ ಕೆಲಸವೇ ಕಡಿಮೆ ಹಾಗೂ ಕೆಲಸವಿಲ್ಲದೆ ತಕ್ಕಮಟ್ಟಿಗೆ ಜೀವನ ನಡೆಸುತ್ತಿದ್ದ ಕೆಲಸಗಾರರು ಆರ್ಥಿಕವಾಗಿ ಸಂಕಷ್ಟ ಹೊಂದಿ ಉಪವಾಸದಲ್ಲಿ ಇರಬೇಕಾದ ಪರಿಸ್ಥಿತಿ ಬಂದಿದೆ. ಇದೆಲ್ಲವನ್ನೂ ಗಮನಿಸಿ ಸರಕಾರವು ಚಿನ್ನ ಬೆಳ್ಳಿ ಕೆಲಸಗಾರರಿಗೆ ಆರ್ಥಿಕ ಸಹಾಯ ಮಾಡಬೇಕೆಂದು ಚಿನ್ನ ಬೆಳ್ಳಿ ಕೆಲಸಗಾರರ ಸಂಘ ಶಾಸಕ ರಘುಪತಿ ಭಟ್ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈಗಾಗಲೇ ರೈತರಿಗೆ ಹಾಗೂ ಮೀನುಗಾರರಿಗೆ ಸಾಲ ಮನ್ನಾ ಮಾಡಿರುವ ಸರಕಾರಕ್ಕೆ ನಾವೇನು ದ್ರೋಹ ಮಾಡಿದ್ದೇವೆ. ಚಿನ್ನ ಬೆಳ್ಳಿ ವ್ಯಾಪಾರಸ್ತರು ಮತ್ತು ಕೆಲಸಗಾರರಿಗೆ ಅಜಗಜಾಂತರ ವ್ಯತ್ಯಾಸವಿದೆ. ಕೆಲಸಗಾರರು ಮೊದಲಿನಿಂದಲೂ ಆರ್ಥಿಕವಾಗಿ ಸ್ಥಿತಿವಂತರಲ್ಲ, ಹಾಗಾಗಿ ಸರ್ಕಾರ ಇದೆಲ್ಲವನ್ನೂ ಗಮನಿಸಿ ಚಿನ್ನ ಬೆಳ್ಳಿ ಕೆಲಸಗಾರರಿಗೆ ವಿಶೇಷವಾಗಿ ಸಹಕಾರ ಮಾಡಬೇಕು.
ಅಸಂಘಟಿತ ಕಾರ್ಮಿಕ ಅಡಿಯಲ್ಲಿ ಬರುವ ನಮಗೆ ಸರಕಾರದಿಂದ ಯಾವುದೇ ಸವಲತ್ತುಗಳು ಸಿಗುತ್ತಿಲ್ಲ. ಹಾಗಾಗಿ ಕಟ್ಟಡ ಕಾರ್ಮಿಕರಿಗೆ ಸಿಗುವ ಎಲ್ಲಾ ಸವಲತ್ತುಗಳು ನಮಗೂ ಸಿಗಬೇಕು ಎಂದು ಸರಕಾರಕ್ಕೆ ಒತ್ತಾಯಿದ್ದಾರೆ .
ಇದೆಲ್ಲವೂ ಸಾಕಾರವಾಗಬೇಕಾದರೆ ಚಿನ್ನ ಬೆಳ್ಳಿ ಕೆಲಸಗಾರರ ಪ್ರತ್ಯೇಕ ನಿಗಮ ಮಂಡಳಿ (ಕರ್ನಾಟಕ ಗೋಲ್ಡ್ ಸ್ಮಿತ್ ಕಾರ್ಪೋರೇಶನ್) ಆದರೆ ಮಾತ್ರ ಸಾಧ್ಯ. ಆದ್ದರಿಂದ ಪ್ರತ್ಯೇಕ ನಿಗಮ ಮಂಡಳಿ ಮಾಡಬೇಕೆಂದು ಸರಕಾರಕ್ಕೆ ವಿನಂತಿಸಿದ್ದಾರೆ.