ನಮಗೆ ಕೇಸರಿ ಬಟ್ಟೆ, ಧ್ವಜ ನೋಡಿ ನೋಡಿ ಸಾಕಾಗಿತ್ತು: ಮಾಜಿ ಸ್ಪೀಕರ್ ರಮೇಶ್
ಉಡುಪಿ: ಹಿಂದೂ, ಕ್ರಿಶ್ಚಿಯನ್‌ಗಳಂತೆ ಮುಸಲ್ಮಾನರು ಕೂಡ ಭಾರತ ಮಾತೆಯ ಮಕ್ಕಳು.
ಅವರನ್ನು ಯಾರು ಅನುಮಾನದಿಂದ ನೋಡಬೇಡಿ. ಒಂದು ವೇಳೆ ನೋಡಿದರೆ ಭಾರತ ಮಾತೆ ಕಣ್ಣೀರು ಹಾಕುತ್ತಾಳೆ ಎಂದು ಮಾಜಿ ಸ್ಪೀಕರ್, ಕಾಂಗ್ರೆಸ್ ಮುಖಂಡ ರಮೇಶ್ ಕುಮಾರ್ ಹೇಳಿದರು. ಇಂದು ನಗರದ ಕ್ರಿಶ್ಚಿಯನ್ ಹೈಸ್ಕೂಲ್ ಮೈದಾನದಲ್ಲಿ ಸಿಎಎ, ಎನ್‌ಸಿಆರ್ ಹಾಗೂ ಎನ್‌ಪಿಆರ್ ಕಾಯ್ದೆ ವಿರುದ್ಧ ಆಯೋಜಿಸಿದ್ದ ಬಹೃತ್ ಪ್ರತಿಭಟನಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.
ನಮಗೆ ಕೇಸರಿ ಬಟ್ಟೆ, ಧ್ವಜ ನೋಡಿ ನೋಡಿ ಸಾಕಾಗಿತ್ತು. ಆದರೆ ಈಗ ದೇಶದಲ್ಲೆಡೆ
ರಾಷ್ಟ್ರಧ್ವಜ ರಾರಾಜಿಸುತ್ತಿದೆ. ಸ್ವಾತಂತ್ರ್ಯ ಕಾಲದಲ್ಲಂತೂ ನಾವು ಇರಲಿಲ್ಲ. ನಾವು
ಸಾಯೋ ಕಾಲದಲ್ಲಿ ಇಷ್ಟೊಂದು ಸಹಸ್ರ ಸಂಖ್ಯೆಯಲ್ಲಿ ರಾಷ್ಟ್ರಧ್ವಜ ನೋಡುವ ಸೌಭಾಗ್ಯ
ಒದಗಿಬಂದಿದ್ದು, ಇದು ಬಹಳಷ್ಟು ಖುಷಿ ತಂದಿದೆ. ಇದಕ್ಕಾಗಿ ಪ್ರಧಾನಿ ಮೋದಿ ಅವರನ್ನು
ಅಭಿನಂದಿಸಬೇಕು ಎಂದು ಮಾತಿನಲ್ಲೇ ಪ್ರಧಾನಿಗೆ ಕುಟುಕಿದರು.
ಬಿಜೆಪಿಗರಿಗೆ ಭಾರತದ ಇತಿಹಾಸ ಗೊತ್ತಿಲ್ಲ:
ಬಿಜೆಪಿಗರಿಗೆ ಭಾರತದ ಇತಿಹಾಸ ಗೊತ್ತಿಲ್ಲ. ಅದು ಅವರಿಗೆ ಬೇಕಾಗಿಯೂ ಇಲ್ಲ. ಆದರೆ
ನಾವು ನಮ್ಮ ಮಕ್ಕಳಿಗೆ ಗೋಡ್ಸೆ ಸಂಸ್ಕೃತಿಯನ್ನು ಕಲಿಸಲು ಬಿಡಲ್ಲ ಎಂದು ವಾಗ್ದಾಳಿ
ನಡೆಸಿದರು.ಅಮೇರಿಕಾದಲ್ಲಿ ಜನಿಸಿದರೆ ಭಾರತದ ಪೌರತ್ವ ಸಿಗುತ್ತದೆ. ಆದರೆ, ಭಾರತದಲ್ಲಿಯೇ ಹುಟ್ಟಿ ಬೆಳೆದವರನ್ನು ಬೀದಿಗೆ ತಳ್ಳಲು ಹೊರಟಿದ್ದಾರೆ. 1955ರಲ್ಲಿ ಜಾತಿ ಧರ್ಮದ ಆಧಾರದಲ್ಲಿ ಪೌರತ್ವ ಕಾಯ್ದೆ ಮಾಡಿರಲಿಲ್ಲ. ಇಂದು ಕೇಂದ್ರ ಸರಕಾರ ರಾಜಕೀಯ ದುರುದ್ದೇಶದಿಂದ ಕಾಯ್ದೆಯನ್ನು ಧರ್ಮಾಧಾರಿತವಾಗಿ ಜಾರಿಗೆ ತಂದಿಗೆ ಎಂದು ಟೀಕಿಸಿದರು.
ಭಗತ್ ಸಿಂಗ್, ಗಾಂಧೀಜಿ ಹಾಗೂ ಇಂದಿರಾ ಗಾಂಧಿಯ ರಕ್ತದಿಂದ ರಾಷ್ಟ್ರ ಧ್ವಜ
ರೂಪುಗೊಂಡಿದೆ. ದೇಶದಲ್ಲಿ ಅಸಮಾನತೆ ಭುಗಿಲೆದಿದ್ದು, ಅದನ್ನು ಹೊಗಲಾಡಿಸುವ ಬದಲುದೇಶದಲ್ಲಿ ಧರ್ಮದ ಕಿಚ್ಚು ಹಬ್ಬಿಸುತ್ತಿದ್ದಾರೆ. ಇದಕ್ಕೆ ಮುಸ್ಲಿಮರು ಆತಂಕ ಪಡುವ ಅಗತ್ಯವಿಲ್ಲ. ನೀವು ಏಕಾಂಗಿಯಲ್ಲ, ನಿಮ್ಮ ಹೋರಾಟಕ್ಕೆ ಇಡೀ ಭಾರತೀಯರ ಬೆಂಬಲವಿದೆ ಎಂದರು.
ಸಮಾವೇಶದಲ್ಲಿ ಸಾಮಾಜಿಕ ಹೋರಾಟಗಾರರಾದ ಮಹೇಂದ್ರ ಕುಮಾರ್, ಕವಿತಾ ರೆಡ್ಡಿ,ವಿದ್ಯಾರ್ಥಿ ನಾಯಕಿ ಅಮೂಲ್ಯ, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಯಾಸೀನ್ ಮಲ್ಪೆ, ಪ್ರಧಾನ ಸಂಚಾಲಕ ರಮೇಶ್ ಕಾಂಚನ್, ಚಿಂತಕ ಜಿ. ರಾಜಶೇಖರ್, ಭವ್ಯ ನರಸಿಂಹಮೂರ್ತಿ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ವಿ. ಶೆಟ್ಟಿ, ವಿಲಿಯಂ ಮಾರ್ಟಿಸ್, ಬಾಲಕೃಷ್ಣ ಶೆಟ್ಟಿ, ಸುಂದರ್ ಮಾಸ್ತರ್, ಯಾಸೀನ್ ಮಲ್ಪೆ, ಶಶಿಧರ್ ಹೆಮ್ಮಾಡಿ, ವೆರೋನಿಕಾ ಕರ್ನೆಲಿಯೊ, ರೋಶನಿ ಒಲಿವೆರಾ ಉಪಸ್ಥಿತರಿದ್ದರು.