ಕದ್ರಿ ದೇವಸ್ಥಾನ ಕೂಡ ಬಾಂಬರ್ ನ ಟಾರ್ಗೆಟ್ ಆಗಿತ್ತಾ?
ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ್ದ ಶಂಕಿತ ವ್ಯಕ್ತಿ ಕದ್ರಿ ಮಂಜುನಾಥೇಶ್ವರ ದೇವಸ್ಥಾನಕ್ಕೂ ಹೋಗಲು ಯತ್ನಿಸಿದ್ದಎಂದು ಪೊಲೀಸ್ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಬಾಂಬ್ ಪತ್ತೆ ಪ್ರಕರಣದ ಕುರಿತ ತನಿಖೆ ತೀವ್ರಗೊಳಿಸಿದ ಪೊಲೀಸ್ ಈಗಾಗಲೇ ಶಂಕಿತ ವ್ಯಕ್ತಿ ಬಂದಿದ್ದ ಎನ್ನಲಾದ ಆಟೋ ಮತ್ತು ಆಟೋ ಚಾಲಕನನ್ನು ವಶಕ್ಕೆ ಪಡೆದು ಮಾಹಿತಿ ಕಲೆ ಹಾಕಿದ್ದಾರೆ. ಮೂಲಗಳ ಪ್ರಕಾರ ಶಂಕಿತ ಆರೋಪಿಯು ಕೆಂಜಾರುವರೆಗೆ ಬಸ್ ನಲ್ಲಿ ಬಂದಿದ್ದ, ಅಲ್ಲಿಂದ ವಿಮಾನ ನಿಲ್ದಾಣಕ್ಕೆ ಬೇರೆ ವಾಹನದಲ್ಲಿ ಹೋಗಿದ್ದ. ಬಾಂಬ್ ಇರಿಸಿ ನಡೆದುಕೊಂಡೇ ಕೆಂಜಾರುವರೆಗೆ ಬಂದಿದ್ದ ಎಂದು ತಿಳಿದು ಬಂದಿದೆ.
ಪ್ರಯಾಣಿಕರೊಬ್ಬರನ್ನು ಕರೆತಂದಿದ್ದ ಆಟೊ ರಿಕ್ಷಾ ಕೆಂಜಾರಿಗೆ ಬಂದಾಗ ಆರೋಪಿ ಅಲ್ಲಿ ನಡೆದು ಹೋಗುತ್ತಿದ್ದ. ಅಡ್ಡ ಹಾಕಿ, ‘ಕದ್ರಿ ದೇವಸ್ಥಾನಕ್ಕೆ ಬಿಡುತ್ತೀರಾ? ಎಷ್ಟು ದರ?’ ಎಂದು ವಿಚಾರಿಸಿದ್ದ. ಆಟೊ ಚಾಲಕ ಹೇಳಿದ್ದ ಮೊತ್ತಕ್ಕೆ ಒಪ್ಪದೇ ಕಾವೂರುವರೆಗೆ ಮಾತ್ರ ಆಟೊದಲ್ಲಿ ಬಂದಿದ್ದ. ಅಲ್ಲಿ ಇಳಿದು ನಾಪತ್ತೆಯಾಗಿದ್ದಾನೆ ಎಂದು ಆಟೋ ಚಾಲಕ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ. ಶಂಕಿತ ವ್ಯಕ್ತಿಯು ತುಳು ಭಾಷೆಯಲ್ಲೇ ತನ್ನೊಂದಿಗೆ ಮಾತನಾಡಿದ್ದಾನೆ. ವಾಪಸ್ ಹೋಗುವಾಗಲೂ ಆತನ ಬಳಿ ಒಂದು ಬ್ಯಾಗ್ ಇತ್ತು ಎಂಬ ಮಾಹಿತಿಯನ್ನೂ ಆಟೊ ಚಾಲಕ ಪೊಲೀಸರಿಗೆ ತಿಳಿಸಿದ್ದಾನೆ.
ಕದ್ರಿ ದೇಗುಲ ಉಗ್ರರ ಟಾರ್ಗೆಟ್?
ಇನ್ನು ಪೊಲೀಸರು ಕಲೆಹಾಕಿರುವ ಮಾಹಿತಿ ಅನ್ವಯ ಕದ್ರಿ ದೇಗುಲ ಬ್ರಹ್ಮೋತ್ಸವವೇ ಉಗ್ರರ ಟಾರ್ಗೆಟ್ ಆಗಿತ್ತು. ಪ್ರಸ್ತುತ ಕದ್ರಿ ದೇಗುಲದಲ್ಲಿ ನಡೆಯುತ್ತಿರುವ ಬ್ರಹ್ಮೋತ್ಸವದಲ್ಲಿ ಸುಮಾರು 30 ರಿಂದ 40 ಸಾವಿರ ಮಂದಿ ಭಕ್ತರು ಸೇರುವ ಸಾಧ್ಯತೆ ಇತ್ತು. ಇದೇ ಕಾರಣಕ್ಕೆ ಉಗ್ರರು ಕದ್ರಿ ದೇಗುಲವನ್ನೇ ಟಾರ್ಗೆಟ್ ಮಾಡಿ ಬಾಂಬ್ ಸ್ಫೋಟಕ್ಕೆ ಯತ್ನಿಸಿರಬಹುದು ಎನ್ನಲಾಗಿದೆ.