ಸ್ವಚ್ಛತೆಯೆಡೆಗೆ ನಮ್ಮ ನಡೆ, ಹಸಿರುಪಡೆಗೆ ಚಾಲನೆ :ಡಿಸಿಯಿಂದ ಚಾಲನೆ

ಮಡಿಕೇರಿ : ವಿದ್ಯಾರ್ಥಿಗಳು ಶೈಕ್ಷಣಿಕ ಹಂತದಲ್ಲಿ ವಿದ್ಯಾರ್ಜನೆಯ ಜೊತೆಯಲ್ಲೆ ಸಾಮಾಜಿಕ ಕಳಕಳಿಯನ್ನು ಹೊಂದುವುದು ಅತ್ಯವಶ್ಯಕವೆಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ. ಕೊಡಗು ಗ್ರೀನ್ ಸಿಟಿ ಫೋರಂ ಹಾಗೂ ಕೊಡಗು ಫಾರ್ ಟುಮಾರೋ ಸಂಘಟನೆಗಳ ವತಿಯಿಂದ ರಚನೆಗೊಂಡಿರುವ ಹಸಿರು ಪಡೆಗೆ ನಗರದ ಕ್ರೆಸೆಂಟ್ ವಿದ್ಯಾಸಂಸ್ಥೆಯಲ್ಲಿ ಚಾಲನೆ ನೀಡಿ ಜಿಲ್ಲಾಧಿಕಾರಿ ಮಾತನಾಡಿದರು.
ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆಯ ಭಾಗವಾದ ಅಂಕಗಳಿಕೆಗೆ ಮಾತ್ರ ಸಿಮೀತವಾಗದೆ, ಸಮಾಜದ ಸುತ್ತಮುತ್ತಲಿನ ವಿಚಾರಧಾರೆಗಳಿಗೆ ಸ್ಪಂದಿಸುವಂತೆ ಕಿವಿ ಮಾತು ಹೇಳಿದರು.

ಕೊಡಗು ಜಿಲ್ಲೆಯಲ್ಲಿ ಕಳೆದ ಸಾಲಿನ ಮುಂಗಾರಿನ ಅವಧಿಯಲ್ಲಿ ಉಂಟಾದ ಪ್ರಾಕೃತಿಕ ವಿಕೋಪದ ಸಂದರ್ಭ ಅನೇಕ ಸಂಘ, ಸಂಸ್ಥೆಗಳು ಸಂಕಷ್ಟದಲ್ಲಿದ್ದವರಿಗೆ ನೆರವಿನ ಹಸ್ತ ಚಾಚಿರುವುದು ಶ್ಲಾಘನೀಯ. ಇದೇ ರೀತಿ ವಿದ್ಯಾರ್ಥಿಗಳ ಸರ್ವಾಂಗೀಣ ಅಭ್ಯುದಯಕ್ಕೂ ಸಂಘ ಸಂಸ್ಥೆಗಳು ಸಹಕಾರ ನೀಡುವಂತಾಗಬೇಕು. ಪರಿಸರಕ್ಕೆ ಪೂರಕವಾದ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡು ಸ್ವಚ್ಛತೆಗೆ ಆದ್ಯತೆ ನೀಡಬೇಕೆಂದು ಜಿಲ್ಲಾಧಿಕಾರಿ ಕರೆ ನೀಡಿದರು.

ಗ್ರೀನ್ ಸಿಟಿ ಫೋರಂನ ಅಧ್ಯಕ್ಷ ಜಯಾಚಿಣ್ಣಪ್ಪ ಅವರು ಮಾತನಾಡಿ, ಮಡಿಕೇರಿ ನಗರವನ್ನು ಸ್ವಚ್ಛವಾಗಿಡುವ ನಿಟ್ಟಿನಲ್ಲಿ ಜಿಲ್ಲಾಡಳಿತದ ಸಹಕಾರದೊಂದಿಗೆ ಫೋರಂ ಹಾಗೂ ಕೊಡಗು ಫಾರ್ ಟುಮಾರೋ ಸಂಘಟನೆಗಳು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಸರ್ವ ಜನತೆಯ ಸಹಕಾರದಿಂದ ಮಡಿಕೇರಿಯನ್ನು ಮಾದರಿ ನಗರವನ್ನಾಗಿ ರೂಪಿಸಲು ಮುಂದಾಗಿರುವುದಾಗಿ ತಿಳಿಸಿದರು.

ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳು ವಿವಿಧ ಬಡಾವಣೆಗಳ ಮನೆ ಮನೆಗಳಿಗೆ ತೆರಳಿ ಸ್ವಚ್ಛತೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು. ಸಂದರ್ಭ ಗ್ರೀನ್ ಸಿಟಿ ಫೋರಂನ ಸ್ಥಾಪಕ ಅಧ್ಯಕ್ಷ ಚೆಯ್ಯಂಡ ಸತ್ಯ, ನಗರಸಭಾ ಆಯುಕ್ತ ರಮೇಶ್, ಕ್ರೆಸೆಂಟ್ ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ಜೈಸಿ ವಿನಯ್, ಕಾರ್ಯದರ್ಶಿ ಹನೀಫ್, ಕೊಡಗು ಫಾರ್ ಟುಮಾರೋ ಸಂಘಟನೆಯ ಹಾಗೂ ಫೋರಂನ ಪದಾಧಿಕಾರಿಗಳು, ಸದಸ್ಯರು ಈ ಸಂದರ್ಭ ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!