ಶಿರೂರು ಮೂಲ ಮಠದಲ್ಲಿ ವೃಂದಾವನ ಪ್ರತಿಷ್ಠಾಪನೆ
ಉಡುಪಿ: ಶಿರೂರು ಲಕ್ಷ್ಮೀವರತೀರ್ಥ ಶ್ರೀಪಾದರ ಪ್ರಥಮ ವರ್ಷದ ಆರಾಧನೆ ಹಾಗೂ ವೃಂದಾವನ ಪ್ರತಿಷ್ಠಾಪನೆ ಕಾರ್ಯಕ್ರಮ ಹಿರಿಯಡಕ ಸಮೀಪದ ಶಿರೂರು ಮೂಲ ಮಠದಲ್ಲಿ ಬುಧವಾರ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೆರವೇರಿತು.
ಬೆಳಿಗ್ಗೆ ಋತ್ವಿಜರು ಪುಣ್ಯಾಹವಾಚನ, ಪವಮಾನ ಹೋಮ, ವಿರಜಾಹೋಮ ಪೂರ್ಣಾಹುತಿ ಬಳಿಕ ಪುಣ್ಯಕಲಶಗಳಿಂದ ಶ್ರೀಗಳ ವೃಂದಾವನಕ್ಕೆ ಅಭಿಷೇಕ ಮಾಡಲಾಯಿತು. ನೂತನ ವೃಂದಾವನಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಇದೇ ಸಂದರ್ಭದಲ್ಲಿ ಚಿಕ್ಕಪಟ್ಟದ ದೇವರಾದ ವಿಠಲ ದೇವರು, ಪಟ್ಟಾಭಿರಾಮ ದೇವರು, ನರಸಿಂಹ ದೇವರು, ಮುಖ್ಯಪ್ರಾಣ ದೇವರಿಗೆ ಪಂಚಾಮೃತ ಅಭಿಷೇಕ, ವಾರ್ಷಿಕ ಮಹಾಭಿಷೇಕ ಮಾಡಲಾಯಿತು. ಸೋದೆ ಮಠದ ದಿವಾನ ಪಾಡಿಗಾರು ಶ್ರೀನಿವಾಸ ತಂತ್ರಿ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದವು.
ಶ್ರೀಗಳ ಆರಾಧನೆ ಅಂಗವಾಗಿ ಮಠದ ಆವರಣದಲ್ಲಿ ನವಗ್ರಹ ವನ ಹಾಗೂ ಶ್ರೀಗಂಧ ವನ ಬೆಳೆಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಅಲ್ಲದೆ, ಆರಾಧನೆಗೆ ಆಗಮಿಸಿದ್ದ ಭಕ್ತರಿಗೆ ಔಷಧೀಯ ಸಸ್ಯಗಳನ್ನು ವಿತರಣೆ ಮಾಡಲಾಯಿತು.
ಸೋದೆ ಮಠ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ರತ್ನಕುಮಾರ್, ಡಾ. ಉದಯಕುಮಾರ್ ಸರಳತ್ತಾಯ, ಮಧ್ವೇಶ ತಂತ್ರಿ, ಶಿರೂರು ಮೂಲ ಮಠದ ಮ್ಯಾನೇಜರ್ ಸುಬ್ರಹ್ಮಣ್ಯ ಭಟ್, ರಾಮದಾಸ ಭಟ್, ವಾಸುದೇವ ಭಟ್ ಪೆರಂಪಳ್ಳಿ, ಲಕ್ಷ್ಮೀನಾರಾಯಣ ಭಟ್ ಮೊದಲಾದವರು ಉಪಸ್ಥಿತರಿದ್ದರು.
ಕೃಷ್ಣಮಠದಲ್ಲಿ ವಿಶೇಷ ಅನ್ನಸಂತರ್ಪಣೆ ಶಿರೂರು ಶ್ರೀಗಳ ಆರಾಧನೆ ಪ್ರಯುಕ್ತ ಉಡುಪಿ ಶ್ರೀಕೃಷ್ಣ ಮಠ ಪರ್ಯಾಯ ಪಲಿಮಾರು ಮಠದ ವತಿಯಿಂದ ಮಠದ ರಾಜಾಂಗಣದಲ್ಲಿ ಮಧ್ಯಾಹ್ನ 12 ಗಂಟೆಯಿಂದ ಭಕ್ತರಿಗೆ ವಿಶೇಷ ಅನ್ನ ಸಂತರ್ಪಣೆ ಜರಗಿತು.