ರಾಜ್ಯದಲ್ಲಿ ಮತ್ತೊಬ್ಬ ವ್ಯಕ್ತಿಯಲ್ಲಿ ವೈರಸ್ ಪತ್ತೆ, ಸೋಂಕಿತರ ಸಂಖ್ಯೆ 27ಕ್ಕೆ ಏರಿಕೆ
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಭೀತಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ವ್ಯಕ್ತಿಯೊಬ್ಬರಲ್ಲಿ ಇದೀಗ ಸೋಂಕು ದೃಢಪಟ್ಟಿದ್ದು, ಈ ಮೂಲಕ ರಾಜ್ಯದಲ್ಲಿ ಸೋಂಕು ಪೀಡಿತರ ಸಂಖ್ಯೆ 27ಕ್ಕೆ ಏರಿಕೆಯಾಗಿದೆ.
ಇಂದು ಬೆಳಿಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರು, ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು, ರಾಜ್ಯದಲ್ಲಿ ಮತ್ತೊಬ್ಬ ವ್ಯಕ್ತಿಯಲ್ಲಿ ಕೊರೋನಾ ವೈರಸ್ ದೃಢಪಟ್ಟಿದ್ದು, ಇದೀಗ ಸೋಂಕು ಪೀಡಿತರ ಸಂಖ್ಯೆ 27ಕ್ಕೆ ಏರಿಕೆಯಾಗಿದೆ ಎಂದು ಹೇಳಿದ್ದಾರೆ.
ಕೊರೋನಾ ವೈರಸ್ ವಿರುದ್ಧ ಹೋರಾಡಲು ರಾಜ್ಯ ಸರ್ಕಾರ ಸರ್ವಸನ್ನದ್ಧವಾಗಿದೆ. ನಮ್ಮ ಸರ್ಕಾರ ಈಗಾಗಲೇ 10 ಲಕ್ಷ ಮಾಸ್ಕ್ ಖರೀದಿಸಲು ಕ್ರಮ ಕೈಗೊಂಡಿದೆ ಮತ್ತು 5 ಲಕ್ಷ ವೈಯಕ್ತಿಕ ರಕ್ಷಣಾ ಸಾಧನಗಳು (PPE) ಖರೀದಿಗೆ ನಿರ್ಧರಿಸಲಾಗಿದೆ. ಆರೋಗ್ಯ ಇಲಾಖೆಯು ಯುದ್ಧೋಪಾದಿಯಲ್ಲಿ ಸೋಂಕು ತಡೆಹಿಡಿಯಲು ಕಾರ್ಯೋನ್ಮುಖವಾಗಿದೆ. ನಾಗರಿಕರು ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ವಿನಂತಿಸುತ್ತೇನೆಂದು ಹೇಳಿದ್ದಾರೆ.
ಅಧಿಕಾರಿಗಳೊಂದಿಗೆ ಸಭೆ ಹಾಗೂ ಸ್ಕ್ಯಾನ್ ರೇ ಕಂಪನಿಯೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಲಾಗಿದ್ದು, ಸಭೆಯಲ್ಲಿ ಈ ಕೂಡಲೇ 1,000 ವೆಂಟಿಲೇಟರ್ ಖರೀದಿಗೆ ತೀರ್ಮಾನ ಕೈಗೊಳ್ಳಲಾಯಿತು. ಪ್ರಸ್ತುತ ರಾಜ್ಯದ ಲಾಕ್’ಡೌನ್’ನನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಸೋಂಕು ಪೀಡಿತ ಪ್ರತೀ ಜಿಲ್ಲೆಗೂ ಶೀಘ್ರದಲ್ಲೇ ಭೇಟಿ ನೀಡಲಿದ್ದೇನೆ. ಪ್ರತೀ ಜಿಲ್ಲೆಯಲ್ಲಿ ಕೊರೋನಾ ಸೋಂಕು ಪೀಡಿತರಿಗಾಗಿ ಪ್ರತ್ಯೇಕ ಆಸ್ಪತ್ರೆಯನ್ನು ಮೀಸಲಿಡಲಾಗುತ್ತದೆ. ಮತ್ತಷ್ಟು ಥರ್ಮಲ್ ಸ್ಕ್ಯಾನರ್ ಖರೀದಿ, ತ್ರಿಲೇಟರ್ ಎನ್95 ಮಾಸ್ಕ್ ಗಳ ಖರೀದಿ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಬಳಿಕ ಮಾತನಾಡಿದ ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ಅವರು, ಜನರು ಆದಷ್ಟು ಮನೆಗಳಲ್ಲಿಯೇ ಇರಬೇಕು. ಅಗತ್ಯವಿದ್ದರೆ ಮಾತ್ರ ಹೊರಗೆ ಬರಲಿ. ಈಗಾಗಲೇ 24 ಗಂಟೆಗಳ ವಿದ್ಯುತ್ ನೀಡಲಾಗುತ್ತಿದೆ ಎಂದಿದ್ದಾರೆ.