ಮಂಗಳೂರು:ಆಸ್ಪತ್ರೆಯಲ್ಲಿ ಪೊಲೀಸರ ದಾಂಧಲೆ ವಿಡಿಯೋ ವೈರಲ್
ಮಂಗಳೂರು: ಪೌರತ್ವ ಕಾಯ್ದೆ ವಿರುದ್ಧ ಮಂಗಳೂರಿನಲ್ಲಿ ನಡೆದ ಹಿಂಸಾಚಾರದ ವೇಳೆ ಪೊಲೀಸರು ಆಸ್ಪತ್ರೆಯೊಂದರಲ್ಲಿ ಪ್ರತಿಭಟನಾಕಾರರ ಮೇಲೆ ನಡೆಸಿರುವ ದಾಂಧಲೆಯ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಹಿಂಸಾಚಾರದ ವೇಳೆ ಪೊಲೀಸರು ಗೋಲಿಬಾರ್ ನಡೆಸಿದ್ದು, ಈ ವೇಳೆ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ್ದರು. ಬಳಿಕ ವ್ಯಕ್ತಿಗಳ ಮೃತದೇಹಗಳನ್ನು ಮಂಗಳೂ ರಿನ ಫಳ್ನೀರ್ ನಲ್ಲಿರುವ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಇರಿಸಲಾಗಿತ್ತು. ಈ ಕುರಿತ ಸುದ್ದಿ ಹರಡುತ್ತಿದ್ದಂತೆಯೇ ನೂರಾರು ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಆಸ್ಪತ್ರೆಯತ್ತ ಧಾವಿಸಲು ಆರಂಭಿಸಿದ್ದರು.
ಆಸ್ಪತ್ರೆ ಬಳಿ ಬಂದಿರುವ ಪೊಲೀಸರು, ಸ್ಥಳದಿಂದ ತೆರಳುವಂತೆ ಪ್ರತಿಭಟನಾಕಾರರಿಗೆ ಸೂಚಿಸಿದ್ದಾರೆ. ಇದಕ್ಕೆ ಪ್ರತಿಭಟನಾಕಾರರು ಒಪ್ಪಿಲ್ಲ. ಬಳಿಕ ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ. ಈ ವೇಳೆ ಹಲವು ಮಂದಿ ಆಸ್ಪತ್ರೆಯ ಒಳಗೆ ಹೋಗಿದ್ದಾರೆ. ಬಳಿಕ ಪೊಲೀಸರು ಆಸ್ಪತ್ರೆ ಒಳಗೆ ಹೋದ ಪ್ರತಿಭಟನಕಾರರಿಗೆ ಹುಡುಕಾಟ ಆರಂಭಿಸಿದ್ದಾರೆ.
ಈ ದೃಶ್ಯಾವಳಿಗಳು ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ. ಆಸ್ಪತ್ರೆಯೊಳಗೆ ಹೋಗಿರುವ ಪೊಲೀಸರು ಕೊಠಡಿಯೊಂದರ ಬಾಗಿಲಿಗೆ ಕಾಲಿನಿಂದ ಒದ್ದು ಬಾಗಿಲು ತೆರೆಯಲು ಯತ್ನಿಸಿದ್ದಾರೆ. ಆದರೂ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ಸ್ಥಳದಿಂದ ತೆರಳಿದ್ದಾರೆ. ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ವಿರೋಧಗಳು ವ್ಯಕ್ತವಾಗುತ್ತಿವೆ.
ಪೊಲೀಸರ ಈ ವರ್ತನೆ ಸ್ಥಳದಲ್ಲಿ ರೋಗಿಗಳು ಹಾಗೂ ಅವರ ಸಂಬಂಧಿಕರಲ್ಲಿ ಭೀತಿ ಹುಟ್ಟಿಸಿತ್ತು. ಆಸ್ಪತ್ರೆಯೊಳಗೆ ಬರುವುದಕ್ಕೂ ಮುನ್ನ ಪೊಲೀಸರು ವಾರೆಂಟ್ ತಂದಿರಲಿಲ್ಲ. ಏಕಾಏಕಿ ಆಸ್ಪತ್ರೆಗೆ ನುಗ್ಗಿದ್ದರು. ಆಸ್ಪತ್ರೆಯೊಳಗೆ ಅನುಮಾನಾಸ್ಪದ ವ್ಯಕ್ತಿಗಳಿದ್ದಾರೆಂದಿದ್ದರೆ, ಮೊದಲು ಪೊಲೀಸರು ಆಸ್ಪತ್ರೆಯ ಸಿಬ್ಬಂದಿಗಳ ಸಹಕಾರ ಕೇಳಬಹುದಿತ್ತು. ಆದರೆ, ಪೊಲೀಸರು ಅದನ್ನು ಮಾಡಲಿಲ್ಲ ಎಂದು ಆಸ್ಪತ್ರೆಯ ಸಿಬ್ಬಂದಿಗಳು ಹೇಳಿದ್ದಾರೆ.
ಪೊಲೀಸರ ವರ್ತನೆಗೆ ಮಾಜಿ ಸಚಿವ ಬಿ.ರಾಮನಾಥ ರೈ ಅವರು ಖಂಡನೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಪೊಲೀಸರು ಆಸ್ಪತ್ರೆಯ ಐಸಿಯುವಿಗೂ ನುಗ್ಗಿದ್ದರು ಎಂದು ಆರೋಪಿಸಿದ್ದಾರೆ.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ನಾಯಕ ಅಶ್ರಫ್ ಕೆ ಮಾತನಾಡಿ, ಗೋಲಿಬಾರ್ ನಲ್ಲಿ ಸಾವನ್ನಪ್ಪಿದ್ದ ಇಬ್ಬರು ವ್ಯಕ್ತಿಗಳ ಕುಟುಂಬಸ್ಥರ ಮೇಲೆ ಪೊಲೀಸರು ದೌರ್ಜನ್ಯ ಎಸಗಿದ್ದರು ಎಂದಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೊಲೀಸ್ ಆಯುಕ್ತ ಪಿ.ಎಸ್.ಹರ್ಷ ಅವರು, ವಿಡಿಯೋವನ್ನು ನಾವು ನೋಡಿಲ್ಲ. ಪೊಲೀಸರಿಗೆ ವರ್ಚಸ್ಸಿಗೆ ಧಕ್ಕೆಯುಂಟು ಮಾಡಲು ಇಂತಹ ವಿಡಿಯೋಗಳು ಹರಿದಾಡುತ್ತಿವೆ ಎಂದು ತಿಳಿಸಿದ್ದಾರೆ.