ಅಯೋಧ್ಯೆ ತೀರ್ಪು ಪರಿಶೀಲನೆ ಸರಿಯಲ್ಲ: ಬಾಬಾ ರಾಮದೇವ್

ಉಡುಪಿ: ಸಮಾಜ ಸುಧಾರಕ ಪೆರಿಯಾರ್‌ನಂತವರು ನಿಕೃಷ್ಟ ಜನರು ಎಂಬ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಪೆರಿಯಾರ್‌ನ ವಿಚಾರಧಾರೆಗಳು ನಿಕೃಷ್ಟ ಎಂಬುದು ಹೇಳಿಕೆಯ ಒಳಾರ್ಥ ಎಂದು ಯೋಗಗುರು ಬಾಬಾ ರಾಮದೇವ್ ಸಮರ್ಥನೆ ನೀಡಿದರು.

ಸೋಮವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಪೆರಿಯಾರ್ ಜೀವನದುದ್ದಕ್ಕೂ ದೇವರ ಅಸ್ತಿತ್ವವೇ ಸುಳ್ಳು, ರಾಮ, ಕೃಷ್ಣ ಹನುಮಂತ ಹಾಗೂ ಪುರಾಣ ಪುರುಷರೆಲ್ಲರೂ ದುರಾಚಾರಿಗಳು ಎಂದು ಹೇಳುತ್ತಲೇ ಬಂದವರು ಎಂದು ರಾಮದೇವ್‌ ವಾಗ್ದಾಳಿ ನಡೆಸಿದರು.

ಪೆರಿಯಾರ್ ಬಾಹ್ಮಣ್ಯವಾದದ ಕಡು ವಿರೋಧಿ. ಎಲ್ಲ ಅಪರಾಧಗಳಿಗೂ ಬ್ರಾಹ್ಮಣವಾದವರೇ ಕಾರಣ ಎಂಬ ಪೆರಿಯಾರ್ ವಾದವನ್ನು ಒಪ್ಪಲಾಗದು. ಭಾರತೀಯ ಪರಂಪರೆ ಸುಳ್ಳು, ಡೋಂಗಿ ಎಂಬ ಅವರ ನಿಲುವು ಖಂಡನೀಯ ಎಂದು ಟೀಕಿಸಿದರು.

‘ಪೆರಿಯಾರ್ ವಿರುದ್ಧ ಮಾತನಾಡಿದ್ದಕ್ಕೆ ದಲಿತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಾನು ಅಂಬೇಡ್ಕರ್ ವಿರುದ್ಧವಾಗಲಿ, ಜ್ಯೋತಿಬಾ ಫುಲೆ ಅವರ ವಿರುದ್ಧವಾಗಲೀ ಮಾತನಾಡಿಲ್ಲ. ವೈಚಾರಿಕ ಆತಂಕವಾದದ ವಿರುದ್ಧ ಮಾತನಾಡಿದ್ದೇನೆ. ಮಾತನಾಡುವ ಸ್ವಾತಂತ್ರ್ಯವನ್ನು ಪ್ರಶ್ನೆಮಾಡುವ ಹಕ್ಕು ಯಾರಿಗೂ ಇಲ್ಲ’ ಎಂದರು.

ತೀರ್ಪು ಪರಿಶೀಲನೆ ಸರಿಯಲ್ಲ: ಅಯೋಧ್ಯೆ ರಾಮಜನ್ಮಭೂಮಿ ವಿವಾದ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ನ ನ್ಯಾಯಾಧೀಶರು ಒಮ್ಮತದಿಂದ ತೀರ್ಪು ಪ್ರಕಟಿಸಿದ್ದಾರೆ. ತೀರ್ಪಿನ ವಿರುದ್ಧ ಮರು ಪರಿಶೀಲನಾ ಅರ್ಜಿ ದಾಖಲಿಸಿರುವುದು ಸಮಾಜದಲ್ಲಿ ಏಕತೆಗೆ ಭಂಗ ಉಂಟುಮಾಡಿದಂತಾಗುತ್ತದೆ ಎಂದು ಬಾಬಾ ರಾಮದೇವ್ ಹೇಳಿದರು.

ಪತಂಜಲಿ ಉತ್ಪನ್ನ ಪ್ರಸಿದ್ಧಿಗೆ ಕ್ರಮ: ವಿದೇಶಗಳಲ್ಲಿ ಪತಂಜಲಿ ಉತ್ಪನ್ನಗಳನ್ನು ಪರಿಚಯಿಸುವ ಉದ್ದೇಶದಿಂದ ಅಂತರರಾಷ್ಟ್ರೀಯ ವೇದಿಕೆಯನ್ನು ಬಳಸಿಕೊಳ್ಳಲಾಗುವುದು. ಅಲ್ಲಿನ ಕಂಪೆನಿಗಳ ಜತೆ ಒಪ್ಪಂದ ಮಾಡಿಕೊಳ್ಳುವ ವಿಚಾರ ಇದೆ ಎಂಬುದಾಗಿ ಪತಂಜಲಿ ಸಂಸ್ಥೆಯ ಬಾಲಕೃಷ್ಣ ಆಚಾರ್ಯ ಹೇಳಿದ್ದಾರೆ. ಅವರ ಹೇಳಿಕೆಯಲ್ಲಿ ತಪ್ಪಿಲ್ಲ. ಸಮಾಜದಿಂದ ಬಂದ ಹಣವನ್ನು ಸಮಾಜಕ್ಕೆ ವಿನಿಯೋಗಿಸುವುದು ಪತಂಜಲಿ ಸಂಸ್ಥೆಯ ಉದ್ದೇಶ ಎಂದರು.

Leave a Reply

Your email address will not be published. Required fields are marked *

error: Content is protected !!