ವೆಂಕಟರಮಣ ಸ್ಪೋರ್ಟ್ ಪಿತ್ರೋಡಿ : ಜನವರಿ 3 – 5 ರವರೆಗೆ ರಾಜ್ಯಮಟ್ಟದ ಕ್ರಿಕೆಟ್
ಉದ್ಯಾವರ : ಉದ್ಯಾವರ ಗ್ರಾಮದ ಹಿರಿಯ ಮತ್ತು ಉತ್ಸಾಹಿ ಸಂಸ್ಥೆಗಳಲ್ಲಿ ಒಂದಾಗಿ, ಮೂರು ದಶಕಗಳಿಂದ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ
ಕಾರ್ಯಗಳಲ್ಲಿ ಮಾತ್ರವಲ್ಲದೇ, ಯಶಸ್ವಿ ಮತ್ತು ಯುವ ಆಟಗಾರರನ್ನು ಪ್ರೋತ್ಸಾಹಿಸುವ ಹಾಗೂ ಬೆಳೆಸಬಲ್ಲ ನಾಯಕ ಪ್ರವೀಣ್ ಕುಮಾರ್ ಪಿತ್ರೋಡಿ ನಾಯಕತ್ವದಲ್ಲಿ, ಕ್ರೀಡಾ ಲೋಕದಲ್ಲಿ ಅತ್ಯಂತ ಶಿಸ್ತುಬದ್ಧವಾಗಿ ತೊಡಗಿಸಿಕೊಂಡು, 15 ಬಾರಿ ರಾಜ್ಯದ ‘ಶಿಸ್ತಿನ ತಂಡ ಪ್ರಶಸ್ತಿ’ ಪಡೆದು ಇತಿಹಾಸ ಬರೆದ ಸಂಸ್ಥೆ “ವೆಂಕಟರಮಣ ಸ್ಪೋರ್ಟ್ಸ್&ಕಲ್ಚರಲ್ ಕ್ಲಬ್” ಪಿತ್ರೋಡಿ ಇವರ ನೇತೃತ್ವದಲ್ಲಿ ಉದ್ಯಾವರ ಪಂಚಾಯತ್ ಮೈದಾನದಲ್ಲಿ ರಾಜ್ಯಮಟ್ಟದ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯ ಕೂಟ ನಡೆಯಲಿದೆ.
ಟೆನ್ನಿಸ್ ಕ್ರಿಕೆಟ್ ವಿನೂತನ ಪ್ರಯೋಗಗಳನ್ನು ನಡೆಸಿ, ಯಶಸ್ಸು ಕಂಡ ವೆಂಕಟರಮಣ ಸಂಸ್ಥೆ ಈ ಬಾರಿ ರಾಜ್ಯ ಮಟ್ಟವಲ್ಲದೇ, ಜಿಲ್ಲಾ ಹಾಗೂ ಗ್ರಾಮೀಣ ಮಟ್ಟದ ಪ್ರತಿಭೆಗಳಿಗೂ ಸಮಾನ ಅವಕಾಶ ಕಲ್ಪಿಸಿದ್ದು, ಜನವರಿ 3, 4 ಹಾಗೂ 5 ರ೦ದು, ಉದ್ಯಾವರ ಗ್ರಾಮ ಪಂಚಾಯತ್ ಮೈದಾನದಲ್ಲಿ ಸತತ ಮೂರು ದಿನಗಳ ಕಾಲ ಹಗಲಿನ ರಾಜ್ಯ ಮಟ್ಟದ “ವೆಂಕಟರಮಣ ಟ್ರೋಫಿ-2020” ಪಂದ್ಯಾವಳಿಯನ್ನು ಆಯೋಜಿಸಿದೆ.
ಉದ್ಯಾವರ ಗ್ರಾಮೀಣ ಮಟ್ಟದ 9, ಜಿಲ್ಲಾ 9 ಹಾಗೂ ರಾಜ್ಯ ಮಟ್ಟದ 6 ತಂಡಗಳು ಸೇರಿದಂತೆ, ಈಗಾಗಲೇ 24 ತಂಡಗಳು ಪ್ರವೇಶಾತಿ ನೋಂದಾಯಿಸಿಕೊಂಡಿದೆ.
3 ನೇ ತಾರೀಖು ಶುಕ್ರವಾರದಂದು ಗ್ರಾಮೀಣ ತಂಡಗಳು ಸ್ಪರ್ಧಿಸಿದರೆ,4 ರಂದು ಜಿಲ್ಲಾ ಮಟ್ಟದ ತಂಡಗಳು ಹಾಗೂ ತಾರೀಖು 5 ರವಿವಾರದಂದು ರಾಜ್ಯದ ಪ್ರತಿಷ್ಟಿತ ತಂಡಗಳು ಸೆಣಸಾಡಲಿದೆ.
ಪ್ರಥಮ ಸ್ಥಾನಿ ತಂಡಕ್ಕೆ 1 ಲಕ್ಷ ನಗದು ಹಾಗೂ ದ್ವಿತೀಯ ಸ್ಥಾನಿ ತಂಡಕ್ಕೆ 50 ಸಾವಿರ ನಗದು ಸಹಿತ,2017 ರ ಪಂದ್ಯಾವಳಿಯಲ್ಲಿ ಬೆಳ್ಳಿಯ ಟ್ರೋಫಿ ನೀಡಿ, ದಾಖಲೆ ಬರೆದಿದ್ದ ಸಂಸ್ಥೆ, ಈ ಬಾರಿ ಟೆನ್ನಿಸ್ ಬಾಲ್ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ವಿಶೇಷವಾಗಿ ವಿನ್ಯಾಸಗೊಳಿಸಲಾದ , ಸ್ವರ್ಣ ಖಚಿತ ಮಿನುಗುವ ಟ್ರೋಫಿಯನ್ನು ನೀಡಿ ವಿನೂತನ ಮೈಲಿಗಲ್ಲನ್ನು ಸ್ಥಾಪಿಸಲಿದೆ. ಮಾತ್ರವಲ್ಲದೆ ವೈಯಕ್ತಿಕ ಬಹುಮಾನಗಳು ಕೂಡ ಆಟಗಾರರಿಗೆ ಪ್ರೋತ್ಸಾಹ ನೀಡಲಿದೆ.
ಪಂದ್ಯಾವಳಿಯ ನೇರ ಪ್ರಸಾರವನ್ನು ವೆಂಕಟರಮಣ ಸಂಸ್ಥೆಯ ಸದಸ್ಯರೇ ಖುದ್ದಾಗಿ ಪ್ರಪ್ರಥಮ ಬಾರಿಗೆ ಪ್ರಾಯೋಗಿಕವಾಗಿ ಯೂ ಟ್ಯೂಬ್ ಚ್ಯಾನಲ್ಲಿ ವೀಕ್ಷಿಸುವ ಸೌಲಭ್ಯವನ್ನು ಕ್ರೀಡಾಭಿಮಾನಿಗಳಿಗೆ ಕಲ್ಪಿಸಿದ್ದಾರೆ.
‘ಶಿಸ್ತಿಗಾಗಿ ಕ್ರಿಕೆಟ್, ಸಮಾಜಕ್ಕಾಗಿ ತಂಡ’ ಧ್ಯೇಯೋದ್ಧೇಶದಡಿ ಪಂದ್ಯಾವಳಿ ನಡೆಯಲಿದ್ದು, ವೆಂಕಟರಮಣ ಸಂಸ್ಥೆ ಮಧ್ಯಮುಕ್ತ ಕ್ರಿಕೆಟ್ ಹಾಗೂ ಸಮಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿದ್ದು, ಪ್ರತಿ ಪಂದ್ಯಕ್ಕೂ ಡೋಪಿಂಗ್ ಟೆಸ್ಟ್ ನಡೆಸಲಿದ್ದು, ಯಾವುದೇ ಆಟಗಾರ ಮಧ್ಯ, ಮಾದಕ ದ್ರವ್ಯ ಸೇವಿಸಿದ್ದು ಕಂಡು ಬಂದಲ್ಲಿ, ಆ ಆಟಗಾರನನ್ನು ಟೂರ್ನಿಯಿಂದ ಹೊರಗಿರಿಸಲಾಗುತ್ತದೆ. ಭಾಗವಹಿಸುವ ತಂಡಗಳು ಪಂದ್ಯ ಪ್ರಾರಂಭವಾಗುವ 15 ನಿಮಿಷ ಮುಂಚಿತವಾಗಿ ಉಪಸ್ಥಿತಿ ತೋರ್ಪಡಿಸಬೇಕಾಗಿದೆ.
ಸಮಾರೋಪ ಸಮಾರಂಭದಲ್ಲಿ ಮಾದಕ ದ್ರವ್ಯ ನಿಷೇಧ ದ ಬಗ್ಗೆ ವಿಶೇಷ ಕಾರ್ಯಕ್ರಮ, ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ, ವಿ.ಎಸ್.ಸಿ ಬ್ಲಡ್ ಫಾರ್ ಲೈಫ್ ಸಂಸ್ಥೆಯ ರಕ್ತದಾನಿ ಸದಸ್ಯರುಗಳಿಗೆ ಹಾಗೂ ಉದ್ಯಾವರ ಕ್ರಿಕೆಟ್ ಪ್ರತಿಷ್ಟೆಯನ್ನು ಉಳಿಸಿದ ಹೆಮ್ಮೆಯ ತಂಡಗಳಿಗೆ ಗೌರವಾರ್ಪಣೆ ಕಾರ್ಯಕ್ರಮ ನಡೆಯಲಿದೆ.
‘ಉಡುಪಿ ಟೈಮ್ಸ್’ ಹಾಗೂ ಸ್ಪೋರ್ಟ್ಸ್ ಕನ್ನಡ ‘ಮೀಡಿಯಾ ಪಾರ್ಟ್ನರ್’ ರೂಪದಲ್ಲಿ ಕಾರ್ಯ ನಿರ್ವಹಿಸಲಿದೆಯೆಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ