ವೆಲಂಕಣಿ ಮಾತೆಯ ಪ್ರತಿಷ್ಠಾಪನಾ ಮಹೋತ್ಸವ : ಕಲ್ಮಾಡಿಯಲ್ಲಿ ಜನಸಾಗರ
ವೆಲಂಕಣಿ ಮಾತೆಯ ಪ್ರತಿಷ್ಠಾಪನಾ ಮಹೋತ್ಸವದ ಸಂಭ್ರಮಿಕ ದಿವ್ಯ ಬಲಿಪೂಜೆಯ ನೇತೃತ್ವವನ್ನು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ. ಜೆರಾಲ್ಡ್ ಐಸಾಕ್ ಲೋಬೊ ವಹಿಸಿದ್ದರು. ಮರಿಯಾ ಮಾತೆ ಸಾಮಾನ್ಯ ಕುಟುಂಬದಿಂದ ಬಂದವರು. ತನ್ನ ಜೀವನವನ್ನು ದೇವರ ವಾಕ್ಯದಂತೆ ನಡೆದು ನಿಸ್ವಾರ್ಥ ಸೇವೆಗೆ ಇವರು ಮಾದರಿಯಾದವರು. ನಮ್ಮ ದೈನಂದಿನ ಜೀವನದಲ್ಲಿ ಮರಿಯಾ ಮಾತೆ ಯವರಂತೆ ಸರಳತೆಯನ್ನು ತೋರ್ಪಡಿಸಿ ದೇವರಲ್ಲಿ ವಿಶ್ವಾಸವಿಡೋಣ. ನಮ್ಮ ಕಷ್ಟದಲ್ಲಿ ಮರಿಯ ಮಾತೆಯ ಬಳಿ ವಿಶ್ವಾಸವಿಟ್ಟು ಪ್ರಾರ್ಥಿಸಿದರೆ ಮರಿಯಾ ಮಾತೆ ಯಾರಿಗೂ ನಿರಾಸೆ ಉಂಟು ಮಾಡುವುದಿಲ್ಲ. ಸದಾ ಕಾಲ ಮರಿಯ ಮಾತೆ ನಮ್ಮೊಂದಿಗೆ ಇರುತ್ತಾರೆ ಎಂದು ಭಕ್ತರಿಗೆ ತಿಳಿಸಿದರು.
+
ಕಳೆದ ಒಂಬತ್ತು ದಿನಗಳ ನೊವೆನಾ ಪ್ರಾರ್ಥನಾ ವಿಧಿಗಳಲ್ಲಿ ಸಾವಿರಾರು ಭಕ್ತರು ಆಗಮಿಸಿ ವೆಲಂಕಣಿ ಮಾತೆಯ ಆಶೀರ್ವಾದವನ್ನು ಪಡೆದುಕೊಂಡರು. ಪ್ರತಿಷ್ಠಾಪನಾ ಮಹೋತ್ಸವದ ದಿನದಂದು ಬೆಳಿಗ್ಗೆ 8 ಗಂಟೆಗೆ ಕೊಂಕಣಿ, ಮಧ್ಯಾಹ್ನ 2 ಗಂಟೆಗೆ ಕೊಂಕಣಿ, 6 ಗಂಟೆಗೆ ಕನ್ನಡ, 8 ಗಂಟೆಗೆ ಇಂಗ್ಲಿಷ್ ನಲ್ಲಿ ವಿವಿಧ ಧರ್ಮಗುರುಗಳ ನೇತೃತ್ವದಲ್ಲಿ ಬಲಿಪೂಜೆಗಳು ನಡೆದವು. ಅದರಲ್ಲೂ ದೂರದ ಊರುಗಳಿಂದ ಬಂದ ಭಕ್ತಾದಿಗಳ ವಿಶೇಷ ಕೋರಿಕೆಯ ಮೇರೆಗೆ ಬೆಳಿಗ್ಗೆ ಹತ್ತು ಗಂಟೆಗೆ ಕೊಂಕಣಿ ಬಲಿಪೂಜೆಯನ್ನು ನಡೆಸಿದ್ದು ವಿಶೇಷವಾಗಿತ್ತು.
ಉಡುಪಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರ ನೇತೃತ್ವದಲ್ಲಿ ಸಂಜೆ 4 ಗಂಟೆಗೆ ನಡೆದ ವಾರ್ಷಿಕ ಮಹೋತ್ಸವದ ಸಂಭ್ರಮದ ಬಲಿ ಪೂಜೆಗೆ ಆರು ಸಾವಿರಕ್ಕೂ ಅಧಿಕ ಭಕ್ತಾದಿಗಳು ಆಗಮಿಸಿದ್ದರು. ಸಂಭ್ರಮದ ದಿವ್ಯ ಬಲಿಪೂಜೆಯಲ್ಲಿ ಉಡುಪಿ ವಲಯದ ಪ್ರಧಾನ ಧರ್ಮಗುರು ವಂದನೀಯ ಫಾ.ವಲೇರಿಯನ್ ಮೆಂಡೋನ್ಸ, ಶಿರ್ವ ವಲಯದ ಪ್ರಧಾನ ಧರ್ಮಗುರು ವಂದನೀಯ ಫಾ. ಡೆನ್ನಿಸ್ ಡೇಸಾ, ಮಣಿಪಾಲ ದೇವಾಲಯದ ಧರ್ಮಗುರು ವಂದನೀಯ ಫಾ. ಫೆಡ್ರಿಕ್ ಡಿಸೋಜ, ತೊಟ್ಟ೦ ದೇವಾಲಯದ ಧರ್ಮಗುರು ಫಾ. ಫ್ರಾನ್ಸಿಸ್ ಕರ್ನೆಲಿಯೊ, ಫಾ. ವಿಲಿಯಂ ಮಾರ್ಟಿಸ್ ಸಹಿತ ಉಡುಪಿ ಮಂಗಳೂರಿನ 20 ಕ್ಕೂ ಅಧಿಕ ಧರ್ಮಗುರುಗಳು ದಿವ್ಯ ಬಲಿ ಪೂಜೆಯಲ್ಲಿ ಭಾಗವಹಿಸಿದ್ದರು.
ಕಳೆದ ಹತ್ತು ದಿನಗಳ ವಿವಿಧ ಪ್ರಾರ್ಥನಾ ವಿಧಿಗಳಲ್ಲಿ ಸಹಕರಿಸಿದ ಪ್ರಧಾನ ದಾನಿಗಳಿಗೆ ಧರ್ಮಾಧ್ಯಕ್ಷರು ಸ್ಮರಣಿಕೆ ನೀಡಿ ಗೌರವಿಸಿದರು. ದೇವಾಲಯದ ಪ್ರಧಾನ ಧರ್ಮಗುರು ವಂದನೀಯ ಫಾ. ಆಲ್ಬನ್ ಡಿಸೋಜ ಹಬ್ಬದ ಯಶಸ್ಸಿನಲ್ಲಿ ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಮರ್ಪಿಸಿ ವೆಲಂಕಣಿ ಮಾತೆ ಸರ್ವರಿಗೂ ಆಶೀರ್ವಾದ ನೀಡಲಿ ಎಂದರು.
ವಾರ್ಷಿಕ ಮಹೋತ್ಸವದ ಉಸ್ತುವಾರಿ ವಂದನೀಯ ಫಾ. ಪ್ರವೀಣ್ ಮೊಂತೆರೋ, ಮಹೋತ್ಸವದ ಯಶಸ್ವಿಯಲ್ಲಿ ಪ್ರಧಾನ ಧರ್ಮಗುರುಗಳೊಂದಿಗೆ ಕೈಜೋಡಿಸಿದ್ದರು. ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಸಂಜಯ್ ಅಂದ್ರಾದೆ, ಕಾರ್ಯದರ್ಶಿ ಶೋಭಾ ಮೆಂಡೋನ್ಸಾ, 18 ಆಯೋಗಗಳ ಸಂಚಾಲಕ ಫ್ರಾನ್ಸಿಸ್ ಫೆರ್ನಾಂಡಿಸ್, ಐಸಿವೈಎಂ ಉಡುಪಿ ಜಿಲ್ಲಾಧ್ಯಕ್ಷ ಡಿಯೋನ್ ಡಿಸೋಜಾ, ಲ್ಯಾನ್ಸಿ ಫೆರ್ನಾಡಿಸ್, ನವೀನ್ ಡಿಸೋಜಾ ಮತ್ತಿತರರು ಉಪಸ್ಥಿತರಿದ್ದರು.
ಕಲ್ಮಾಡಿ ವೆಲಂಕಣಿ ಮಾತೆಯ ಪುಣ್ಯ ಕ್ಷೇತ್ರಕ್ಕೆ ಸಾವಿರಾರು ಭಕ್ತಾದಿಗಳೊಂದಿಗೆ ಜನಪ್ರತಿನಿಧಿಗಳು ಭಾಗವಹಿಸಿ ಆಶೀರ್ವಚನವನ್ನು ಪಡೆದರು. ಉಡುಪಿ ಜಿಲ್ಲಾ ಮಾಜಿ ಉಸ್ತುವಾರಿ ಸಚಿವರಾದ ಪ್ರಮೋದ್ ಮಧ್ವರಾಜ್ ವೆಲಂಕಣಿ ಮಾತೆಯ ಪುಣ್ಯ ಕ್ಷೇತ್ರಕ್ಕೆ ಭೇಟಿ ಕೊಟ್ಟು ಧರ್ಮಗುರುಗಳಾದ ವಂದನೀಯ ಫಾ. ಆಲ್ಬನ್ ಡಿಸೋಜ ಮತ್ತು ಇತರ ಧರ್ಮಗುರುಗಳಿಂದ ಆಶೀರ್ವಾದವನ್ನು ಪಡೆದರು.
ಚಿತ್ರಗಳು : ಪ್ರವೀಣ್ ಕೋರೆಯ, ಸ್ಯಾನಿ ಡಿಜಿಟಲ್, ಕಲ್ಮಾಡಿ.