ಸಾವರ್ಕರ್‌ಗೆ “ಭಾರತ ರತ್ನ” ವಿರೋಧ ಸರಿಯಲ್ಲ: ಪೇಜಾವರ ಶ್ರೀ

ಬಾಗಲಕೋಟೆ: ‘ವಿವಾದಾಸ್ಪದ ಕೆಲಸಗಳನ್ನು ಮಾಡಿದ ಟಿಪ್ಪು ಸುಲ್ತಾನ್‌ಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗೌರವ ಕೊಡ್ತಾರೆ, ವೀರ ಸಾವರ್ಕರ್‌ಗೆ ಭಾರತ ರತ್ನ ಪ್ರಶಸ್ತಿ ಕೊಡೋದಕ್ಕೆ ವಿರೋಧಿಸುತ್ತಾರೆ. ಅದು ಸರಿಯಲ್ಲ‘ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಹಾತ್ಮ ಗಾಂಧಿ ಹತ್ಯೆ ಪ್ರಕರಣದಲ್ಲಿ ವೀರ ಸಾರ್ವಕರ್ ಅಪರಾಧಿ ಎಂದು ಅಂದಿನ ಸರ್ಕಾರವಾಗಲಿ, ನ್ಯಾಯಾಲಯವಾಗಲಿ ಎಲ್ಲಿಯೂ ಹೇಳಿಲ್ಲ. ಹಾಗಿದ್ದರೆ ಅವರಿಗೆ ನ್ಯಾಯಾಲಯ ಶಿಕ್ಷೆ ನೀಡಬೇಕಿತ್ತು‘ ಎಂದರು. 

‘ಗಾಂಧಿ ಹತ್ಯೆಯಲ್ಲಿ ಆರ್‌ಎಸ್‌ಎಸ್ ಹಾಗೂ ಸಾವರ್ಕರ್ ಕೈವಾಡ ಇತ್ತು ಎಂದು ಹೇಳೋದು ಸರಿಯಲ್ಲ. ಸಾರ್ವಕರ್ ಅವರಿಂದ ಸ್ವಾತಂತ್ರ್ಯ ಹೋರಾಟಕ್ಕೆ ಖಂಡಿತವಾಗಿಯೂ ಬಲಬಂದಿತ್ತು. ಅವರೊಬ್ಬ ಅಪ್ರತಿಮ ದೇಶಭಕ್ತ‘ ಎಂದು ಬಣ್ಣಿಸಿದರು.

‘ರಾಮಜನ್ಮಭೂಮಿ ವಿವಾದ ನ್ಯಾಯಾಲಯದ ಹೊರಗೆ ಸಂಧಾನದ ಮೂಲಕ ಇತ್ಯರ್ಥವಾದರೆ ಒಳ್ಳೆಯದು. ಹಿಂದೂ–ಮುಸ್ಲಿಮರ ನಡುವೆ ಪ್ರೀತಿ ಬೆಳೆಯುತ್ತೆ. ತೀರ್ಪು ಬಂದರೆ ಮಾನಸಿಕ ಘರ್ಷಣೆಗೆ ಕಾರಣವಾಗುತ್ತದೆ. ಕೋರ್ಟ್ ತೀರ್ಪಿನಿಂದ ಗೆದ್ದೆ, ಸೋತೆ ಅನ್ನೋ ಭಾವನೆ ಬರುತ್ತದೆ‘ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!