ಕನಿಕಾ ಜತೆಗಿದ್ದ ವಸುಂಧರಾ ರಾಜೇ, ಪುತ್ರ ದುಶ್ಯಂತ್‌ ಸಂಸತ್ತಿಗೂ ಹಾಜರಿ!

ನವದೆಹಲಿ: ಲಖನೌದಲ್ಲಿ ಬಾಲಿವುಡ್‌ ಗಾಯಕಿ ಕನಿಕಾ ಕಪೂರ್‌ ಅತಿಥಿಯಾಗಿದ್ದ ಕಾರ್ಯಕ್ರಮದಲ್ಲಿ ಬಿಜೆಪಿ ಹಿರಿಯ ನಾಯಕಿ, ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಹಾಗೂ ಅವರ ಪುತ್ರ ದುಶ್ಯಂತ್‌ ಸಿಂಗ್‌ ಭಾಗಿಯಾಗಿದ್ದರು. ಕನಿಕಾ ಅವರಿಗೆ ಕೋವಿಡ್‌–19 ದೃಢಪಟ್ಟಿರುವುದು ಇಂದು ಬಹಿರಂಗವಾಗಿದೆ. 

ಕನಿಕಾ ಕಪೂರ್‌ಗೆ ಕೊರೊನಾ ಸೋಂಕು ದೃಢಪಟ್ಟಿರುವುದು ತಿಳಿಯುತ್ತಿದ್ದಂತೆ ದುಶ್ಯಂತ್‌ ಸಿಂಗ್‌ ಹಾಗೂ ವಸುಂಧರಾ ರಾಜೇ ಜನರ ಸಂಪರ್ಕದಿಂದ ಪ್ರತ್ಯೇಕಗೊಂಡಿದ್ದಾರೆ. ಆದರೆ, ದುಶ್ಯಂತ್‌ ಕಾರ್ಯಕ್ರಮದ ನಂತರ ಸಂಸತ್‌ ಸದನದಲ್ಲಿ ಹಾಜರಿದ್ದರು ಎಂದು ವರದಿಯಾಗಿದೆ. ‘ಲಖನೌದಲ್ಲಿ ನಾನು ನನ್ನ ಮಗ ದುಶ್ಯಂತ್‌ ಮತ್ತು ಅವನ ಮಾವ ರಾತ್ರಿ ಔತಣಕೂಟದಲ್ಲಿ ಭಾಗಿಯಾಗಿದ್ದೆವು. ದುರದೃಷ್ಟವಶಾತ್‌ ಕೋವಿಡ್‌–19 ದೃಢಪಟ್ಟಿರುವ ಕನಿಕಾ ಸಹ ಅಲ್ಲಿ ಅತಿಥಿಯಾಗಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ನಾನು ಮತ್ತು ನನ್ನ ಮಗ ವಿಷಯ ತಿಳಿದ ಕೂಡಲೇ ಸ್ವತಃ ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದ್ದೇವೆ’ ಎಂದು ವಸುಂಧರಾ ರಾಜೇ ಟ್ವೀಟ್‌ ಮಾಡಿದ್ದಾರೆ. 

ಪಾರ್ಟಿಯಲ್ಲಿ ಭಾಗಿಯಾಗಿದ್ದ ದುಶ್ಯಂತ್‌ ನಂತರದಲ್ಲಿ ಸಂಸತ್ತಿಗೆ ಹಾಜರಾಗಿದ್ದರು. ಈ ಬಗ್ಗೆ ತೃಣಮೂಲ ಕಾಂಗ್ರೆಸ್‌ ಮುಖಂಡ ಡೆರಿಕ್‌ ಓಬ್ರೀನ್‌ ಟ್ವಿಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿ, ಸಂಸತ್‌ ಕಾರ್ಯಾಚರಣೆ ಸ್ಥಗಿತಗೊಳಿಸುವಂತೆ ಆಗ್ರಹಿಸಿದ್ದಾರೆ. ‘ಈ ಸರ್ಕಾರ ಎಲ್ಲರನ್ನೂ ಅಪಾಯಕ್ಕೆ ದೂಡುತ್ತಿದೆ. ಸ್ವತಃ ಪ್ರತ್ಯೇಕವಾಗಿರುವ ಎಚ್ಚರಿಕೆ ನಡೆ ಅನುಸರಿಸುವಂತೆ ಪ್ರಧಾನಿ ಹೇಳುತ್ತಾರೆ,

ಆದರೆ ಸಂಸತ್ತು ಕಾರ್ಯನಿರ್ವಹಿಸುತ್ತಿದೆ. ನಾನು ಒಂದು ದಿನ ದುಶ್ಯಂತ್‌ ಪಕ್ಕದಲ್ಲಿ ಎರಡೂವರೆ ಗಂಟೆ ಕುಳಿತಿದ್ದೆ. ಇಬ್ಬರು ಸಂಸದರು ಈಗಾಗಲೇ ಜನರ ಸಂಪರ್ಕದಿಂದ ದೂರ ಉಳಿದಿದ್ದಾರೆ. ಸದನವನ್ನು ಮುಂದೂಡಬೇಕು’ ಎಂದು ಒತ್ತಾಯಿಸಿದ್ದಾರೆ. 

‘ನಾನು ಯಾರನ್ನೆಲ್ಲ ಸಂಪರ್ಕಿಸಿದ್ದೆ ಎನ್ನುವ ಮಾಹಿತಿಯನ್ನು ಕಲೆ ಹಾಕುವ ಕಾರ್ಯ ಪ್ರಗತಿಯಲ್ಲಿದೆ. 10 ದಿನಗಳ ಹಿಂದೆ ವಿಮಾನ ನಿಲ್ದಾಣದಲ್ಲಿ ನನ್ನನ್ನು ಸ್ಕ್ಯಾನಿಂಗ್‌ಗೆ ಒಳಪಡಿಸಲಾಗಿತ್ತು. ಆದರೆ, ನಾನು ಮನೆಗೆ ಬಂದ ನಂತರದಲ್ಲಿ ನಾಲ್ಕು ದಿನಗಳ ಹಿಂದೆಯಷ್ಟೇ ಜ್ವರ, ನೆಗಡಿಯ ಲಕ್ಷಣಗಳು ಕಾಣಿಸಿಕೊಂಡಿತು. ನಿಮಗೂ ಜ್ವರ, ನೆಗಡಿ, ಕೆಮ್ಮಿನ ಲಕ್ಷಣ ಕಾಣಿಸಿಕೊಂಡರೆ, ಪ್ರತ್ಯೇಕವಾಗಿ ಉಳಿದು ಕೂಡಲೇ ಪರೀಕ್ಷೆಗೆ ಒಳಗಾಗಿ’ ಎಂದು ಕನಿಕಾ ಕಪೂರ್‌ ಶುಕ್ರವಾರ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಕನಿಕಾ ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಎಲ್ಲರೂ ಪ್ರತ್ಯೇಕವಾಗಿ ವಾಸಿಸಲು ಆರಂಭಿಸುವಂತೆ ಉತ್ತರ ಪ್ರದೇಶ ಆರೋಗ್ಯ ಇಲಾಖೆ ಸೂಚಿಸಿದೆ. ಅನಾರೋಗ್ಯದ ಲಕ್ಷಣಗಳು ಕಂಡು ಬಂದರೆ ವರದಿ ಮಾಡುವಂತೆ ತಿಳಿಸಿದೆ.


Leave a Reply

Your email address will not be published. Required fields are marked *

error: Content is protected !!