ಉಡುಪಿಗೆ 2022ಕ್ಕೆ ವಾರಾಹಿಯ ಶುದ್ದ ಕುಡಿಯುವ ನೀರು: ಧರ್ಮೇಗೌಡ
ಉಡುಪಿ: ವಾರಾಹಿಯಿಂದ ಉಡುಪಿ ನಗರಕ್ಕೆ ಕುಡಿಯುವ ನೀರು ಪೂರೈಸುವ ಯೋಜನೆಯ ಕಾಮಗಾರಿಯನ್ನು ತ್ವರಿತವಾಗಿ ಮಾಡಬೇಕು. 2022ನೇ ಸಾಲಿನೊಳಗೆ ಜನರಿಗೆ ಶುದ್ದ ಕುಡಿಯುವ ನೀರು ಒದಗಿಸಬೇಕು. ಯೋಜನೆಯ ಅನುಷ್ಠಾನದಲ್ಲಿ ವಿಳಂಬ ಮಾಡುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ವಿಧಾನ ಪರಿಷತ್ ಉಪಸಭಾಪತಿ ಎಸ್.ಎಲ್. ಧರ್ಮೇಗೌಡ ಎಚ್ಚರಿಸಿದರು.
ವಾರಾಹಿಯಿಂದ ಉಡುಪಿ ನಗರಕ್ಕೆ ಕುಡಿಯುವ ನೀರು ಪೂರೈಸುವ ಯೋಜನೆಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿ, ಉಡುಪಿ ನಗರದ ಜನತೆಗೆ ಕುಡಿಯುವ ನೀರು ಒದಗಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ಬುಧವಾರ ಉಡುಪಿ ಪ್ರವಾಸಿ ಬಂಗಲೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಉಡುಪಿ ನಗರಕ್ಕೆ ನಿರಂತರವಾಗಿ ಕುಡಿಯುವ ನೀರು ಪೂರೈಸಲು ರೂಪಿಸಿರುವ ಈ ಯೋಜನೆಯನ್ನು ವಿಳಂಬಕ್ಕೆ ಆಸ್ಪದ ನೀಡದಂತೆ ಪೂರ್ಣಗೊಳಿಸಲಾಗುವುದು ಎಂದರು.ಈ ಹಿಂದೆ ವಾರಾಹಿಯಿಂದ ನೇರವಾಗಿ ನೀರನ್ನು ಬಜೆ ಜಲಾಶಯಕ್ಕೆ ತಂದು ಅಲ್ಲಿ ಶುದ್ದೀಕರಿಸಿ ಉಡುಪಿ ನಗರಕ್ಕೆ ಕುಡಿಯುವ ನೀರು ಒದಗಿಸಲು ಯೋಜನೆ ರೂಪಿಸಲಾಗಿತ್ತು. ಆದರೆ ಇದರಿಂದ ಮಾರ್ಗಮಧ್ಯೆ ಇರುವ ಗ್ರಾಮಗಳಿಗೆ ಕುಡಿಯುವ ನೀರು ಒದಗಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಯೋಜನೆಯಲ್ಲಿ ಕೆಲವೊಂದು ಮಾರ್ಪಾಡು ಮಾಡಲಾಗಿದ್ದು, ಹಾಲಾಡಿ ಬಳಿ ನೀರನ್ನು ಶುದ್ಧೀಕರಿಸಿ ಬಜೆ ವರೆಗಿನ ಮಾರ್ಗ ಮಧ್ಯೆ ಬರುವ 13 ಗ್ರಾಮ ಪಂಚಾಯಿತಿಗಳ 23 ಗ್ರಾಮಗಳಿಗೆ ಹಾಗೂ ಮೇಲ್ಭಾಗದ ಹಾಲಾಡಿ ಮತ್ತು ಶಂಕರನಾರಾಯಣ ಗ್ರಾಮಗಳಿಗೂ ಕುಡಿಯುವ ನೀರು ಒದಗಿಸಲು ಯೋಜನೆ ರೂಪಿಸಲಾಗಿದೆ ಎಂದರು.
ವಾರಾಹಿ ಕಾಲುವೆಯಿಂದ ಮಾತ್ರ ನೀರು ಪಡೆಯದೆ, ಹೊಳೆಯಿಂದಲೂ ನೀರು ಪಡೆದು ಪೂರೈಸಬೇಕು. ಹಾಗೆಯೇ ಕಾಮಗಾರಿ ವೇಳೆ ಉನ್ನತ ಗುಣಮಟ್ಟದ ಯಂತ್ರೋಪಕರಣಗಳನ್ನು ಬಳಸಿ, ಯೋಜನೆಯ ಅನುಷ್ಠಾನದಲ್ಲಿ ಯಾವುದೇ ಅಡ್ಡಿಗಳು ಬಾರದಂತೆ ಮುನ್ನೆಚ್ಚರಿಕೆ ವಹಿಸಬೇಕು. ಸುಮಾರು 300 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಯೋಜನೆಯ ಪ್ರಯೋಜನ ಕನಿಷ್ಠ 50 ವರ್ಷಗಳ ವರೆಗೆ ಉಡುಪಿಯ ಜನತೆಗೆ ದೊರೆಯುವಂತೆ ಕಾಮಗಾರಿ ಅನುಷ್ಠಾನಗೊಳಿಸಬೇಕು ಎಂದುಅವರು ತಿಳಿಸಿದರು.ವಿಧಾನ ಪರಿಷತ್ ಅರ್ಜಿ ಸಮಿತಿಯ ಸದಸ್ಯರಾದ ಶಾಸಕ ಎಸ್.ವಿ. ಸಂಕನೂರ್, ಮರಿ ತಿಬ್ಬೇಗೌಡ , ಪ್ರಕಾಶ್ ರಾಥೋಡ್, ರಘುನಾಥ್ ಮಲ್ಕಾಪುರ, ಪಿ.ಆರ್. ರಮೇಶ್, ಮೋಹನ್ ಕೊಂಡಾಜಿ, ಉಡುಪಿ ಶಾಸಕ ರಘುಪತಿ ಭಟ್, ಜಿಲ್ಲಾಧಿಕಾರಿ ಜಿ. ಜಗದೀಶ್, ಸಿಇಒ ಪ್ರೀತಿ ಗೆಹ್ಲೋಟ್, ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು ಉಪಸ್ಥಿತರಿದ್ದರು.