ನಾಡಿನೆಲ್ಲೆಡೆ ವೈಕುಂಠ ಏಕಾದಶಿಯ ಸಂಭ್ರಮ
ಮೈಸೂರು,ಜ.6:- ಇಂದು ಎಲ್ಲೆಡೆ ವೈಕುಂಠ ಏಕಾದಶಿಯ ಸಂಭ್ರಮ ಮನೆಮಾಡಿದೆ. ಭಕ್ತರು ಮುಂಜಾನೆಯೇ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಿದ್ದಾರೆ.
ಮೈಸೂರಿನಲ್ಲಿಯೂ ವಿವಿಧ ದೇವಾಲಯಗಳಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂಜೆ ಆಯೋಜಿಸಲಾಗಿದೆ. ವೆಂಕಟರಮಣ ದೇಗುಲಗಳಲ್ಲಿ, ಲಕ್ಷ್ಮಿ ನರಸಿಂಹ, ಯೋಗಾ ನರಸಿಂಹ ದೇವಸ್ಥಾನಗಳಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂಜೆ ನಡೆಯುತ್ತಿದೆ. ಟಿ.ನರಸೀಪುರದ ಶ್ರೀ ಗುಂಜಾನರಸಿಂಹ ಸ್ವಾಮಿ ದೇವಾಲಯಕ್ಕೆ ಭಕ್ತ ಸಾಗರ ಹರಿದು ಬಂದಿದ್ದು, ವಿವಿಧ ಪುಷ್ಪಾಲಂಕಾರದಿಂದ ಶ್ರೀ ಗುಂಜಾನರಸಿಂಹ ಸ್ವಾಮಿ ಕಂಗೋಳಿಸುತ್ತಿದ್ದಾನೆ. ಬ್ರಾಹ್ಮಿ ಮುಹೂರ್ತದಲ್ಲಿ ದೇವಸ್ಥಾನದಲ್ಲಿ ನಿರ್ಮಿಸಲಾದ ಸ್ವರ್ಗದ ಬಾಗಿಲನ್ನು ಸಹಸ್ರಾರು ಭಕ್ತರು ಪ್ರವೇಶ ಮಾಡಿದ್ದಾರೆ. ಈ ಬಾಗಿಲನ್ನು ಪ್ರವೇಶ ಮಾಡಿದರೆ ಸ್ವರ್ಗ ಪ್ರಾಪ್ತಿಯಾಗಲಿದೆ ಎನ್ನುವುದು ಭಕ್ತರ ನಂಬಿಕೆ. ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳಿಗೆ ಲಡ್ಡು ವಿತರಿಸಲಾಗುತ್ತಿದೆ. ವಿಷ್ಣು ಸಹಸ್ರ ನಾಮ ಚಾರಿಟಬಲ್ ಟ್ರಸ್ಟ್ ಸದಸ್ಯರು ಲಡ್ಡು ವಿತರಿಸುತ್ತಿದ್ದಾರೆ. ವಿಶೇಷ ಪೂಜೆ ಪುನಸ್ಕಾರದಿಂದ ದೇಗುಲದಲ್ಲಿ ಸಂಭ್ರಮ ಮನೆ ಮಾಡಿದ್ದು, ಭಕ್ತರು ನಾರಾಯಣನ ಜಪ ಮಾಡುತ್ತ ಕುಳಿತಿದ್ದಾರೆ. ವೈಕುಂಠ ಏಕಾದಶಿಯ ದಿನ ಬಹಳಷ್ಟು ಭಕ್ತರು ಉಪವಾಸವಿದ್ದು, ದೇವರ ಪೂಜೆ ಕೈಗೊಳ್ಳುತ್ತಾರೆ.