ಉಡುಪಿ: ಮಿಲಾಗ್ರೀಸ್ ಕಾಲೇಜಿನಲ್ಲಿ ಉದ್ಯೋಗ ಮೇಳ ಉದ್ಘಾಟನೆ
ಉಡುಪಿ, ಮೇ 4: ವೈಫಲ್ಯ ದಿಂದ ಧೃತಿಗೇಡಬಾರದು. ಅದನ್ನು ಧನಾತ್ಮಕವಾಗಿ ಸ್ವೀಕರಿಸಿದಾಗ ಜೀವನದಲ್ಲಿ ಯಶಸ್ಸು ಸಾಧಿಸಬಹುದು ಎಂದು ಡೈಜಿವರ್ಲ್ಡ್ ಸಂಸ್ಥಾಪಕ ವಾಲ್ವರ್ ನಂದಳಿಕೆ ಅವರು ಹೇಳಿದ್ದಾರೆ.
ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜು ಮತ್ತು ವಿಜ್ಡಮ್ ಸಂಸ್ಥೆಗಳ ನೆಟ್‌ವರ್ಕ್ ಸಹಯೋಗದೊಂದಿಗೆ ಕಾಲೇಜಿನ ಆವರಣದಲ್ಲಿ ಆಯೋಜಿಸಲಾದ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯಶಸ್ಸು ಲಭಿಸಿದರೆ ನಾಯಕತ್ವ ನೀಡಿ ವಿಫಲವಾದರೆ ಅದರಿಂದ ಪಾಠ ಕಲಿತು ಇತರರಿಗೆ ಮಾರ್ಗ ದರ್ಶನ ಮಾಡಬೇಕು.
ಅಧ್ಯಕ್ಷತೆ ವಹಿಸಿದ್ದ ಮಿಲಾಗ್ರಿಸ್ ಶಿಕ್ಷಣ ಸಂಸ್ಥೆಗಳ ಸಂಚಾಲಕ ಅತೀ ವಂ. ವೆಲೇರಿಯನ್ ಮೆಂಡೋಂಸ ಅವರು ಮಾತನಾಡಿ, ನಮ್ಮಲ್ಲಿ ಉದ್ಯೋಗಾವಕಾಶಗಳು ಸಾಕಷ್ಟು ಇವೆ. ಅದಕ್ಕೆ ಬೇಕಾದ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಇದೇ ವೇಳೆ ವಿಜ್ಡಮ್ ಸಂಸ್ಥೆಗಳ ಸಂಸ್ಥಾಪಕಿ ಮಿಲಾಗ್ರಿಸ್ ಕಾಲೇಜಿನ ಹಳೆ ವಿದ್ಯಾರ್ಥಿನಿ ಡಾ. ಪ್ರಾನ್ಸಿಸ್ಕಾ ಗುರು ತೇಜ್ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ವಿನ್ಸಂಟ್ ಆಳ್ವ, ಉಪ ಪ್ರಾಂಶುಪಾಲ ಸೋಫಿಯಾ ಡಯಾಸ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶೇಖರ್ ಗುಜ್ಜರಬೆಟ್ಟು, ಶಿಕ್ಷಕರಕ್ಷಕ ಸಂಘದ ಅಧ್ಯಕ್ಷ ಗಣೇಶ್ ಮೇಸ್ತಾ , ರಸಾಯನ ಶಾಸ್ತ್ರ ವಿಭಾಗದ ಅಪರ್ಣಾ, ಪ್ಲೇಸ್‌ಮೆಂಟ್ ಆಫೀಸರ್ ಕಾರ್ತಿಕ್ ನಾಯಕ್, ಆಂತರಿಕ ಗುಣಮಟ್ಟ ಕೋಶದ ನಿರ್ದೇಶಕ ಡಾ.ಜಯರಾವ್ ಶೆಟ್ಟಿಗಾರ್ ಉಪಸ್ಥಿತರಿದ್ದರು.
ಈ ಉದ್ಯೋಗ ಮೇಳದಲ್ಲಿ ಭಾರತ ಮಾತ್ರಲ್ಲದೆ ಅಮೇರಿಕ ಹಾಗೂ ಕೊಲ್ಲಿ ರಾಷ್ಟ್ರಗಳಿಂದ 47 ಕಂಪೆನಿಗಳು ಮತ್ತು ಉಡುಪಿ, ಮಂಗಳೂರು, ಶಿವಮೊಗ್ಗ ಚಿಕ್ಕಮಗಳೂರು ಜಿಲ್ಲೆಗಳಿಂದ 1500ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಭಾಗವಹಿಸಿದ್ದರು.