ನಾಯಿಗಳ ದಾಳಿ, ಪಿಲಿಕುಳದಲ್ಲಿ 10 ಕಾಡುಕುರಿ ಸಾವು
ಮಂಗಳೂರು ಜೂನ್ 26: ಜೂನ್ 26 ರಂದು ಮುಂಜಾನೆ ಪಿಲಿಕುಳ ಜೈವಿಕ ಉದ್ಯಾವನದ ಕಾಡುಕುರಿಗಳ ಆವರಣದ ಒಳಗೆ ಪ್ರವೇಶಿಸಿದ ಹೊರಗಿನ ಸಾಕುನಾಯಿಗಳು ಮತ್ತು ಬೀದಿನಾಯಿಗಳು ಕಾಡುಕುರಿಗಳನ್ನು ಅಟ್ಟಾಡಿಸಿದ ಪರಿಣಾಮ ಹತ್ತು ಕಾಡುಕುರಿಗಳು ಸಾವನ್ನಪ್ಪಿವೆ. ಐದು ಕುರಿಗಳಿಗೆ ಗಾಯಗಳಾಗಿವೆ.
ಸತ್ತ ಮತ್ತು ಗಾಯಗೊಂಡ ಕೆಲವು ಕಾಡುಕುರಿಗಳನ್ನು ನಾಯಿಗಳು ಕಚ್ಚಿ ಕೊಂದಿದ್ದು ಉಳಿದವು ಭಯದಿಂದ ಓಡಾಡಿ ಆವರಣದ ಗೋಡೆಗೆ ಬಡಿದು ಗಾಯಗೊಂಡಿರುವುದು ಕಂಡುಬಂದಿದೆ. ಮೃಗಾಲಯದ ಸುತ್ತ ಆವರಣ ಇದ್ದು, ರಾತ್ರಿ ಮಳೆ ಗಾಳಿಗೆ ಆವರಣದ ಗೋಡೆಮೇಲೆ ಮರ ಬಿದ್ದಿದ್ದು ಕಂಡು ಬಂದು ಅದರ ಮೆಲೆ ಏರಿ ಒಳಪ್ರವೇಶಿಸಿರಬಹುದು ಎಂದು ಸಂಶಯಿಸಲಾಗಿದೆ.
ಕಾಂಪೌಂಡ್ ಸುತ್ತ ಅಪಾಯಕಾರಿ ಮರಗಳನ್ನು ತೆರವುಗೊಳಿಲಾಗುವುದು ಮತ್ತು ಆವರಣದ ಗೋಡೆಯನ್ನು ಎತ್ತರಗೊಳಿಸಲು ಕ್ರಮಕೈಗೊಳ್ಳಲಾಗುವುದು. ರಾತ್ರಿ ಹೊತ್ತು ಭದ್ರತಾ ಸಿಬ್ಬಂದಿಗಳು ಮೃಗಾಲಯದ ಒಳಗೆ ಗಸ್ತು ನಡೆಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಮಂಗಳೂರು ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕರ ಪ್ರಕಟಣೆ ತಿಳಿಸಿದೆ.