ಮದುವೆಯಾಗುವುದಾಗಿ ನಂಬಿಸಿ ವಂಚನೆ: ವಕೀಲನ ವಿರುದ್ಧ ಕ್ರಮ ಕೈಗೊಳ್ಳದ ಪೊಲೀಸರು

ಉಡುಪಿ (ಉಡುಪಿ ಟೈಮ್ಸ್ ವರದಿ): ಮದುವೆಯಾಗುವುದಾಗಿ ನಂಬಿಸಿ ಯುವತಿಯೊಂದಿಗೆ ಹಲವು ಭಾರಿ ದೈಹಿಕ ಸಂಪರ್ಕ ಬೆಳೆಸಿ ಯುವತಿಯನ್ನು ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಕೋಟ, ಕಾವ್ರಾಡಿ ನಿವಾಸಿ, ಉಡುಪಿಯ ವಕೀಲ ಸುಕುಮಾರ್ ಶೆಟ್ಟಿಯನ್ನು ಬಂಧಿಸಿ ಶಿಕ್ಷೆ ನೀಡಿ, ಸಂತ್ರಸ್ತ ಯುವತಿಗೆ ನ್ಯಾಯ ಕೊಡಿಸುವಂತೆ ಮನೆಯವರು ಕೋರಿಕೊಂಡಿದ್ದಾರೆ. 

ಈ ಬಗ್ಗೆ ಉಡುಪಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿರುವ, ಸಂತ್ರಸ್ತೆಯ ಭಾವ ಉಮೇಶ್ ಅವರು, ಕಳೆದ 5 ವರ್ಷದಿಂದ ಅಂದರೆ 2015 ರಿಂದ 2020 ರ ವರಗೆ ಪ್ರೀತಿಸುತ್ತಿದ್ದ ವಕೀಲ ಸುಕುಮಾರ್ ಶೆಟ್ಟಿ ಎಪ್ರಿಲ್ ತಿಂಗಳಲ್ಲಿ ಮದುವೆ ಆಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ವಂಚಿಸಿದ್ದಾನೆ.

ಎಪ್ರಿಲ್ ನಲ್ಲಿ ಮದುವೆಯಾಗುವುದಾಗಿ ನಂಬಿಸಿದ್ದ ಈತ ಜುಲೈನಲ್ಲಿ ಯುವತಿಯನ್ನು ಬ್ರಹ್ಮಾವರಕ್ಕೆ ಕರೆದೊಯ್ದು ಹಲ್ಲೆ ನಡೆಸಿ, ಮದುವೆಯಾಗಲು ಸಾಧ್ಯವಿಲ್ಲ ಎಂದು ತಿರಸ್ಕರಿಸಿದ್ದಾನೆ, ಅಲ್ಲದೆ ಮನೆಯಲ್ಲಿ ಸಮಸ್ಯೆ ಇದ್ದು ತಂದೆ ತಾಯಿಯನ್ನು ಬಿಟ್ಟು ಮದುವೆಯಾಗಲು ಸಾಧ್ಯವಿಲ್ಲ, ನೀನು ಏನು ಬೇಕಾದರೂ ಮಾಡಿಕೋ ಎಂದು ಹೇಳಿದ್ದಾನೆ ಎಂದು ಆರೋಪಿಸಿದ್ದಾರೆ.  ಯುವತಿ ಈ ಸಮಸ್ಯೆ ಸರಿಯಾಗಬಹುದು ಎಂಬ ಭರವಸೆಯಲ್ಲಿದ್ದು, ಈ ಬಗ್ಗೆ ಆರೋಪಿ ಏನೂ ಸ್ಪಂದಿಸಿಲ್ಲ.

ಮೊದಲು ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ದೂರು ನೀಡಿದಾಗ ಅಲ್ಲಿ ನಿರಾಕರಿಸಿದ ಕಾರಣ ಬ್ರಹ್ಮಾವರದಲ್ಲಿ ಈ ಬಗ್ಗೆ ತಿಳಿಸಿದಾಗ ಅಲ್ಲಿಯೂ ನಿರಾಕರಿಸಿದ್ದಾರೆ. ಬಳಿಕ ಈ ಬಗ್ಗೆ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಡಿ.13 ರಂದು ಆರೋಪಿಯ ವಿರುದ್ಧ ಎಫ್ ಐ ಆರ್ ದಾಖಲು ಮಾಡಲಾಗಿತ್ತು. ಆದರೆ ಮಹಿಳಾ ಠಾಣೆಯಲ್ಲಿ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಂತೆ ಕಾಣುವುದಿಲ್ಲ. ಯಾಕೆಂದರೆ ಮಹಿಳಾ ಠಾಣೆಯಲ್ಲಿ  ಈ ಬಗ್ಗೆ ಕೇಳಿದರೆ ಆರೋಪಿ ತಲೆ ಮರೆಸಿಕೊಂಡಿದ್ದು, ವಿಚಾರಿಸುತ್ತಿದ್ದೇವೆ ಎಂದು ತಿಳಿಸುತ್ತಿದ್ದಾರೆ ವಿನಹ ಯಾವುದೇ ರೀತಿ ಸರಿಯಾದ ಮಾಹಿತಿ ನೀಡುತ್ತಿಲ್ಲ. ಇನ್ನು ವಿಚಾರವಾಗಿ ಎಸ್‌ಪಿ ಹಾಗೂ ಡಿಐಜಿ ಗೂ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಈ ಬಗ್ಗೆ ಮಾತು ಮುಂದುವರೆಸಿದ ಅವರು, ಸುಕುಮಾರ್ ಶೆಟ್ಟಿ ಕಡೆಯಿಂದ ಮನೆಗೆ ಬೆದರಿಕೆ ಕರೆಗಳು ಬರುತ್ತಿದ್ದು, ನಮಗೆ ಜೀವ ಬೆದರಿಕೆ ಇದೆ. ಆದ್ದರಿಂದ ಮನೆಯವರು ಎಲ್ಲೂ ತಿರುಗಾಡದಂತಾಗಿದೆ. ಈ ಬಗ್ಗೆ ಇನ್ನಾದರು ಗಮನ ಹರಿಸಿ ಆರೋಪಿ ಸುಕುಮಾರ್ ಶೆಟ್ಟಿಯನ್ನು ಬಂಧಿಸಿ ಶಿಕ್ಷೆ ನೀಡಿ ನಮಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!