ರಾಜ್ಯಪಾಲರ ಪ್ರಾಸಿಕ್ಯೂಷನ್ ಅನುಮತಿಯಿಂದ ಏನೂ ಆಗುವುದಿಲ್ಲ- ಸಚಿವ ರಹೀಂ ಖಾನ್
ಉಡುಪಿ, ಆ.18: ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿರುವುದರಿಂದ ಏನೂ ಆಗುವುದಿಲ್ಲ. ಏಕೆಂದರೆ ಅದನ್ನು ಬಿಜೆಪಿಯವರು ಬೇಕಾಗಿಯೇ ಮಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ದಿಲ್ಲಿಯಲ್ಲಿ, ಜಾರ್ಖಂಡ್‌ನಲ್ಲಿ ಮಾಡಿದಂತೆ ರಾಜ್ಯಪಾಲರನ್ನು ಮುಂದಿಟ್ಟುಕೊಂಡು ಬಿಜೆಪಿಯವರು ಇಲ್ಲೂ ಹುನ್ನಾರ ಮಾಡಿದ್ದಾರೆ ಎಂದು ರಾಜ್ಯ ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್ ಹೇಳಿದ್ದಾರೆ.
ಸಚಿವರಾದ ಬಳಿಕ ಮೊದಲ ಬಾರಿ ಉಡುಪಿಗೆ ಆಗಮಿಸಿದ ಸಚಿವರು, ಬ್ರಹ್ಮಗಿರಿಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಕಾರ್ಯಕರ್ತರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತಿದ್ದರು.
ಪ್ರಾಸಿಕ್ಯೂಷನ್ ಅನುಮತಿ ವಿರುದ್ಧ ಹೈಕೋರ್ಟ್ ಮೆಟ್ಟಲೇರಿದ್ದು, ಸೋಮವಾರ ನಮ್ಮ ಪರವಾಗಿ ತೀರ್ಮಾನ ಬರುವ ವಿಶ್ವಾಸವಿದೆ. ಶೇ.100ಕ್ಕೆ ನೂರು ತೀರ್ಪು ನಮ್ಮ ಪರವಾಗಿ ಆಗುತ್ತೆ ಎಂಬ ನಿರೀಕ್ಷೆ ನಮ್ಮದು. ಏಕೆಂದರೆ ಈ ಕೇಸಿನಲ್ಲಿ ಯಾವುದೇ ಹುರುಳಿಲ್ಲ ಎಂದರು.
ಬಿಜೆಪಿ ಪಕ್ಷದ ಪರವಾಗಿರುವ ರಾಜ್ಯಪಾಲರನ್ನು ತಕ್ಷಣ ಬದಲಾಯಿಸಿ ಎಂಬುದು ನಮ್ಮ ಬೇಡಿಕೆಯಾಗಿದೆ. ಈ ಪ್ರಕರಣಕ್ಕೂ ಮುಖ್ಯಮಂತ್ರಿಗಳಿಗೂ ಯಾವುದೇ ಸಂಬಂಧವಿಲ್ಲ. ಅವರ ವಿರುದ್ಧ ಯಾವುದೇ ದಾಖಲೆಗಳಿಲ್ಲ. ಪ್ರಕರಣ ನೋಡಿದರೆ ನಿಮಗೆ ಗೊತ್ತಾಗುತ್ತದೆ ಎಂದರು.
ಈ ವಿಷಯದಲ್ಲಿ ಕಾಂಗ್ರೆಸ್‌ನ ಮುಂದಿನ ನಡೆಯೇನು, ಬಿಜೆಪಿಯ ತಂತ್ರಕ್ಕೆ ನಿಮ್ಮ ಪ್ರತಿತಂತ್ರ ಏನು ಎಂದು ಅವರನ್ನು ಪ್ರಶ್ನಿಸಿದಾಗ, ಸೋಮವಾರ ಹೈಕೋರ್ಟ್ ನೀಡುವ ತೀರ್ಪನ್ನು ನೋಡಿಕೊಂಡು ಕ್ಯಾಬಿನೆಟ್ ಸಮಿತಿ ಸಭೆಯಲ್ಲಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.
ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಖಂಡನೆ:
ಉದ್ದೇಶಪೂರ್ವಕವಾಗಿ ರಾಜ್ಯಪಾಲರ ಮೂಲಕ ಸಿದ್ಧರಾಮಯ್ಯರ ಪ್ರಾಸಿಕ್ಯೂಷನ್‌ಗೆ ಬಿಜೆಪಿ ನಡೆಸಿರುವ ಹುನ್ನಾರವನ್ನು ತಾವು ಖಂಡಿಸುವುದಾಗಿ ಮಾಜಿ ಸಚಿವ ವಿನಯಕುಮಾರ್ ಸೊರಕೆ ಹೇಳಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದ ಹೊರತಾಗಿಯೂ ಬಿಜೆಪಿ ಯಾವುದೇ ಪಾಠ ಕಲಿತಿಲ್ಲ. ಅದರ ಮನೋಭಾವದಲ್ಲಿ ಏನೂ ಬದಲಾವಣೆಯಾಗಿಲ್ಲ ಎಂದರು.
ಕಳೆದ 10 ವರ್ಷಗಳಲ್ಲಿ ಬಿಜೆಪಿ ದೇಶದಲ್ಲಿ 182 ಜನತೆಯಿಂದ ಆಯ್ಕೆಯಾದ ವಿಪಕ್ಷದ ಶಾಸಕರನ್ನು ಖರೀದಿಸಿದೆ. ಆದರೂ ತಾನು ವಿಶ್ವಗುರು ಎಂದು ಮೋದಿ ಹೇಳಿಕೊಳ್ಳುತ್ತಾರೆ ಎಂದು ಟೀಕಿಸಿದ ಅವರು, ಈ ಮೂಲಕ ಕರ್ನಾಟಕವೂ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಆಡಳಿತ ಪಕ್ಷವನ್ನು ಉರುಳಿಸುವ ಕೆಲಸ ಮಾಡಿದೆ ಎಂದರು.
ದೇಶದ ಕಾನೂನು ವ್ಯವಸ್ಥೆ ಮೇಲೆ ನಮಗೆ ಭರವಸೆ ಇದೆ. ನ್ಯಾಯಾಲಯದ ಮೇಲೆ ನಮಗೆ ವಿಶ್ವಾಸವಿದೆ. ನ್ಯಾಯಾಲಯ ನಮಗೆ ನ್ಯಾಯ ಕೊಡುತ್ತದೆ ಎಂಬ ವಿಶ್ವಾಸವಿದೆ. ಇಡೀ ಕರ್ನಾಟದ ಜನತೆ ಸಿದ್ಧರಾಮಯ್ಯರ ಬೆನ್ನಹಿಂದಿದೆ.ಸಚಿವ ಸಂಪುಟ ಸಿದ್ಧರಾಮಯ್ಯರ ಹಿಂದಿದೆ. ಎಲ್ಲಾ 136 ಶಾಸಕರು ಮುಖ್ಯಮಂತ್ರಿಗಳ ಹಿಂದಿದ್ದಾರೆ. ಸಿದ್ಧರಾಮಯ್ಯರ ವಿರುದ್ಧ ನಡೆದಿರುವ ಪಿತೂರಿಯ ಕುರಿತು ಪ್ರತಿಭಟನೆ ನಡೆಸಿ ಜನಜಾಗೃತಿ ಮೂಡಿಸುತ್ತೇವೆ ಎಂದು ಸೊರಕೆ ಹೇಳಿದರು.