ಪ್ರಿಯಾಂಕ ಗಾಂಧಿ ಬಂಧನ: ಕಾಂಗ್ರೆಸ್ ಪಂಜಿನ ಮೆರವಣಿಗೆ- ಸಿದ್ದರಾಮಯ್ಯ, ಡಿಕೆಶಿ ಸಹಿತ ಹಲವರ ಬಂಧನ
ಬೆಂಗಳೂರು: ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರ ಭೇಟಿಯ ವಿರುದ್ಧ ರೈತರು ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಎಂಟು ಮಂದಿ ಮೃತಪಟ್ಟ ಲಖಿಂಪುರ–ಖೇರಿಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಭೇಟಿ ನೀಡಿ ಸಾಂತ್ವಾನ ಹೇಳಲು ಅವಕಾಶ ನೀಡದೇ ಬಂಧಿಸಿರುವ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಪ್ರದೇಶ ಕಾಂಗ್ರೆಸ್ ಹಾಗೂ ಯುವ ಕಾಂಗ್ರೆಸ್ ನಿಂದ ನಗರದಲ್ಲಿಂದು ಬೃಹತ್ ಪಂಜಿನ ಮೆರವಣಿಗೆ ನಡೆಯಿತು.
ಬಿಜೆಪಿ ಸರ್ಕಾರದ ವಿರುದ್ಧ ಯುವ ಕಾರ್ಯಕರ್ತರು, ಮಹಿಳಾ ಕಾಂಗ್ರೆಸ್ ವಿಭಾಗದ ಪ್ರತಿನಿಧಿಗಳು ಒಳಗೊಂಡಂತೆ ಹಲವು ಪ್ರಮುಖ ನಾಯಕರು, ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಕೆಪಿಸಿಸಿಯಿಂದ ರಾಜಭವನದವರೆಗೆ ಆಯೋಜಿಸಲಾಗಿದ್ದ ಪಂಜಿನ ಮೆರವಣಿಗೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾ ರೆಡ್ಡಿ, ಸಲೀಂ ಅಹಮದ್, ದೃವನಾರಾಯಣ್, ಕೆಪಿವೈಸಿಸಿ ಅಧ್ಯಕ್ಷ ಎಂ.ಎಸ್. ರಕ್ಷಾ ರಾಮಯ್ಯ ಮತ್ತಿತರರರು ಪಾಲ್ಗೊಂಡಿದ್ದರು.
ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ಭಿತ್ತಿಪತ್ರ ಪ್ರದರ್ಶಿಸಿ ಘೋಷಣೆ ಕೂಗಿದರು. ಪೊಲೀಸರು ಸಿದ್ದರಾಮಯ್ಯ, ಡಿಕೆ. ಶಿವಕುಮಾರ್, ರಕ್ಷಾ ರಾಮಯ್ಯ ಮತ್ತಿತರರನ್ನು ಬಂಧಿಸಿ ಕರೆದೊಯ್ದರು. ಬಳಿಕ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ನೇತೃತ್ವದ ನಿಯೋಗ ರಾಜಯಭವನಕ್ಕೆ ತೆರಳಿ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ‍್ ನೇತೃತ್ವದಲ್ಲಿ ಸಚಿವರಾಗಿರುವ ಆರೋಪಿಗಳನ್ನು ಬಂಧಿಸಿ ಕ್ರಮ ಜರುಗಿರುಸುವಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಿತು.
ದೇಶ 75ನೇ ಸ್ವಾತಂತ್ರ್ಯೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಕ್ರಾಂತಿಯ ಸಂಕೇತವಾದ ಪಂಜು ಹಿಡಿದಿದ್ದ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ವಿರುದ್ಧ ಘೋಷಣೆ ಮೊಳಗಿಸಿದರು. ರೈತರ ಮೇಲೆ ಕಾರು ಹರಿಸಿ ಅವರ ಸಾವಿಗೆ ಕಾರಣವಾದ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ‍್ ಮಿಶ್ರಾ ಅವರ ವಿರುದ್ಧ ಕಠಿಣ ಕ್ರಮಗಳಡಿ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಆಗ್ರಹಿಸಿದರು.
ಉತ್ತರ ಪ್ರದೇಶದಲ್ಲಿ ರಾಕ್ಷಸಿ ಪ್ರವೃತ್ತಿಯ ಆಡಳಿತ ನಡೆಯುತ್ತಿದ್ದು, ಇದು ಅಕ್ಷರಶಃ ಜಂಗಲ್ ರಾಜ್ ಆಗಿ ಪರಿವರ್ತನೆಯಾಗಿದೆ. ಅಲ್ಪ ಸಂಖ್ಯಾತರು, ದಲಿತರು, ಶೋಷಿತರ ಮೇಲೆ ನಿರಂತರ ದಾಳಿಗಳು ನಡೆಯುತ್ತಿವೆ. ಇದೀಗ ರೈತರ ನರಮೇಧವೂ ಸಹ ಆರಂಭವಾಗಿದೆ. ರಾಷ್ಟ್ರಪತಿ ಅವರು ಕೂಡಲೇ ಮಧ್ಯಪ್ರವೇಶಿಸಿ ಈ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಡಿ.ಕೆ. ಶಿವಕುಮಾರ್ ಮಾತನಾಡಿ, ಯಾವುದೇ ನೋಟಿಸ್ ಇಲ್ಲದೇ ನಮ್ಮ ನಾಯಕಿ ಪ್ರಿಯಾಂಕ ಗಾಂಧಿ ಅವರನ್ನು ಬಂಧಿಸಿರುವುದು ಖಂಡನೀಯ. ರೈತರನ್ನು ಕೊಲೆ ಮಾಡಿದವರನ್ನು ಬಂಧಿಸಿಲ್ಲ. ಸಾತ್ವಾನ ಹೇಳಲು ಹೊರಟಿದ್ದ ನಮ್ಮ ನಾಯಕಿಯನ್ನು ಬಂಧಿಸಿದ್ದು ಖಂಡನೀಯ. ದೇಶದ ಅಖಂಡ ರೈತರ ಪರವಾಗಿ ನಮ್ಮ ಹೋರಾಟ ಮುಂದುವರೆಯಲಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರು ಈ ಕೂಡಲೇ ರಾಜೀನಾಮೆ ನೀಡುಬೇಕು ಎಂದು ಒತ್ತಾಯಿಸಿದರು.
ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ರಕ್ಷಾ ರಾಮಯ್ಯ ಮಾತನಾಡಿ, ರಾಜ್ಯದ ಹಲವು ಜಿಲ್ಲೆಗಳಲ್ಲಿ ಯುವ ಕಾಂಗ್ರೆಸ್ ಹೋರಾಟ ನಡೆಸಿದ್ದು, ಈ ಹೋರಾಟವನ್ನು ತಾರ್ಕಿತ ಅಂತ್ಯಕ್ಕೆ ಕರೆದೊಯ್ಯುತ್ತೇವೆ. ಬಿಜೆಪಿ ಸರ್ಕಾರದ ವಿರುದ್ಧ ಹೋರಾಟ ತೀವ್ರಗೊಳ್ಳಲಿದೆ. 1980 ರಲ್ಲಿ ಇಂದಿರಾ ಗಾಂಧಿ ಅವರನ್ನು ಸಹ ಇದೇ ರೀತಿಯಲ್ಲಿ ಬಂಧಿಸಲಾಗಿತ್ತು. ಇದೀಗ ಇತಿಹಾಸ ಮರುಕಳಿಸಿದೆ. ಬಿಜೆಪಿಯ ಕಪ್ಪು ಕಾನೂನುಗಳ ವಿರುದ್ಧ ಹೋರಾಟ ತೀವ್ರಗೊಳ್ಳಲಿದೆ ಎಂದು ಹೇಳಿದರು.