ಆಪ್ ಶಾಸಕ ನರೇಶ್ ಯಾದವ್ ಬೆಂಗಾವಲು ವಾಹನದ ಮೇಲೆ ಗುಂಡಿನ ದಾಳಿ: ಓರ್ವ ಸಾವು
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ಸಂಭ್ರಮಾಚರಣೆ ಮಾಡುತ್ತಿರುವ ಸಮಯದಲ್ಲಿಯೇ ಪಕ್ಷದ ಶಾಸಕ ನರೇಶ್ ಯಾದವ್ ಅವರ ಬೆಂಗಾವಲು ವಾಹನದ ಮೇಲೆ ದುಷ್ಕರ್ಮಿಗಳ ತಂಡ ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆಂದು ಬುಧವಾರ ತಿಳಿದುಬಂದಿದೆ.
ಮಹರೌಲಿ ಶಾಸಕ ನರೇಶ್ ಮತ್ತು ಆತನ ಬೆಂಬಲಿಗರು ತಮ್ಮ ಚುನಾವಣಾ ಕ್ಷೇತ್ರದಲ್ಲಿರುವ ದೇವಾಲಯಕ್ಕೆ ಹೋಗಿ ಪ್ರಾರ್ಥಿಸಿ ಹಿಂದಿರುಗುತ್ತಿದ್ದರು. ಈ ವೇಳೆ ನೈಋತ್ಯ ದೆಹಲಿಯ ಕೃಷ್ಣಾಗಡ್ ಗ್ರಾಮದಲ್ಲಿ ಶಾಸಕರು ಸಂಚರಿಸುತ್ತಿದ್ದ ವಾಹನದ ಮೇಲೆ ದುಷ್ಕರ್ಮಿಗಳು 7 ಸುತ್ತು ಗುಂಡು ಹಾರಿಸಿದ್ದಾರೆ.
ಪರಿಣಾಮ ದಾಳಿಯಲ್ಲಿ ಓರ್ವ ಕಾರ್ಯಕರ್ತ ಸಾವನ್ನಪ್ಪಿದ್ದು, ಮತ್ತೊಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳು ವ್ಯಕ್ತಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ಸಂಬಂಧ ಸ್ಥಳಕ್ಕಾಗಮಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ದಾಳಿಯಲ್ಲಿ ಸಾವನ್ನಪ್ಪಿದ ವ್ಯಕ್ತಿಯನ್ನು ಪಕ್ಷದ ಕಾರ್ಯಕರ್ತ ಅಶೋಕ್ ಮನ್ ಎಂದು ಹೇಳಲಾಗುತ್ತಿದೆ.
ಪ್ರಕರಣ ಸಂಬಂಧ ಹೇಳಿಕ ನೀಡಿರುವ ದೆಹಲಿ ಪೊಲೀಸರು ದಾಳಿಕೋರರು ಶಾಸಕರನ್ನು ಗುರಿ ಮಾಡಿರಿಲಿಲ್ಲ. ಉದ್ದೇಶ ಪೂರ್ವಕವಾಗಿಯೇ ಸಾವನ್ನಪ್ಪಿದ ವ್ಯಕ್ತಿಯನ್ನು ಗುರಿ ಮಾಡಿ ದಾಳಿ ನಡೆಸಿದ್ದಾರೆಂದು ಹೇಳಿದ್ದಾರೆ.
ನರೇಶ್ ಯಾದವ್ ದಾಳಿಕೋರರ ಗುರಿಯಾಗಿರಲಿಲ್ಲ. ಸಾವನ್ನಪ್ಪಿದ ವ್ಯಕ್ತಿಯೇ ಅವರ ಗುರಿಯಾಗಿದ್ದ ಎಂದು ಡಿಸಿಪಿ ಇಂಗಿತ್ ಪ್ರತಾಪ್ ಸಿಂಗ್ ಅವರು ಹೇಳಿದ್ದಾರೆ.