ಅನರ್ಹ ಶಾಸಕರು ಸಮಾಜದ ರಕ್ಷಣೆ ಮಾಡಿದ್ದಾರೆ:ಡಾ.ಅಶ್ವಥ್
ಉಡುಪಿ: ಕೆಟ್ಟ ಮೈತ್ರಿ ಸರ್ಕಾರವನ್ನು ಕಿತ್ತೊಗೆಯುವಲ್ಲಿ ಅನರ್ಹ ಶಾಸಕರು ಪ್ರಮುಖ
ಪಾತ್ರವನ್ನು ನಿಭಾಯಿಸಿದ್ದಾರೆ. ಅವರು ಸಮಾಜವನ್ನು ರಕ್ಷಣೆ ಮಾಡಿದ ವ್ಯಕ್ತಿಗಳು,
ಅವರಿಗೆ ಮಾನ್ಯತೆ ಸಿಗದಿದ್ದರೆ ಇನ್ನೂ ಯಾರಿಗೆ ಮಾನ್ಯತೆ ಕೊಡಲು ಸಾಧ್ಯ ಎಂದು ಉಪ
ಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ್ ಹೇಳಿದರು.
ಉಡುಪಿ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅನರ್ಹ
ಶಾಸಕರಿಗೆ ಟಿಕೆಟ್ ಕೊಡಲು ಬಿಜೆಪಿಯಲ್ಲಿಯೇ ವಿರೋಧವಿದೆಯಲ್ಲ ಎಂಬ ಪ್ರಶ್ನೆಗೆ
ಉತ್ತರಿಸಿದ ಅವರು, ಅನರ್ಹ ಶಾಸಕರು ಇನ್ನು ಪಕ್ಷ ಸೇರಿಲ್ಲ. ಪಕ್ಷ ಸೇರ್ಪಡೆಗೊಂಡ ಬಳಿಕ
ಯಾರಿಗೆ ಟಿಕೆಟ್ ಕೊಡಬೇಕೆಂಬುವುದನ್ನು ಪಕ್ಷ ತೀರ್ಮಾನ ಮಾಡಲಿದೆ ಎಂದು ಅಡ್ಡ ಗೋಡೆಯ ಮೇಲೆ ದೀಪವಿಟ್ಟರು.
ಉಪಚುನಾವಣೆಯ ಮೇಲೆ ಡಿಕೆಶಿ ಪ್ರಭಾವ ಬೀರುತ್ತಾರ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ
ಅವರು, ಅಧಿಕಾರದಲ್ಲಿದ್ದ ಸರ್ಕಾರವನ್ನೇ ಉಳಿಸಿಕೊಳ್ಳಲು ಆಗದಿದ್ದವರಿಗೆ ಇನ್ನು ಏನು
ಮಾಡಲು ಸಾಧ್ಯವಿದೆ ಎಂದು ಪರೋಕ್ಷವಾಗಿ ಡಿಕೆಶಿಗೆ ಟಾಂಗ್ ನೀಡಿದರು. ಸದ್ಯ ಡಿಕೆಶಿ
ಕತೆ ‘ಇಲಿ ಬಂದ್ರೆ ಹುಲಿ ಬಂತು’ ಎನ್ನುವ ರೀತಿ ಆಗಿದೆ. ಅವರಿಗೆ ನೀಡುತ್ತಿರುವ
ಪ್ರಚಾರ ವಿಡಂಬನಾತ್ಮಕವಾಗಿದೆ. ಹಾಗಾಗಿ ಇದಕ್ಕೆ ಹೆಚ್ಚಿನ ಮಹತ್ವ ಕೊಡುವ
ಅಗತ್ಯವಿಲ್ಲ. ಒಂದು ಸಮುದಾಯದ (ಒಕ್ಕಲಿಗ) ಅಡಿಗೆ ಹೋಗಿ ರಕ್ಷಣೆ ಪಡೆಯುವುದು ಸರಿಯಲ್ಲ ಎಂದರು.
ಇಂದು ಸಮಾಜಕ್ಕೆ ಭ್ರಷ್ಟಾಚಾರ ರಹಿತ ಆಡಳಿತ ಬೇಕಾಗಿದೆ. ಈವೆರೆಗೆ ಭ್ರಷ್ಟಾಚಾರವನ್ನು
ಎದುರಿಸಿ ಜನರು ತತ್ತರಿಸಿ ಹೋಗಿದ್ದಾರೆ. ಭ್ರಷ್ಟಾಚಾರಕ್ಕೆ ಪ್ರೋತ್ಸಾಹ ನೀಡುವ ಪಕ್ಷ
(ಕಾಂಗ್ರೆಸ್)ವನ್ನು ಅಧಿಕಾರದಿಂದ ದೂರ ಇಡಬೇಕೆಂಬುವುದನ್ನು ನಿಶ್ಚಯ ಮಾಡಿದ್ದಾರೆ.
ನಮಗೆ ಯಾರ ಮೇಲೂ ವೈಯಕ್ತಿಕ ದ್ವೇಷ ಇಲ್ಲ. ಭ್ರಷ್ಟಾಚಾರ ಮುಕ್ತ ವ್ಯವಸ್ಥೆಯನ್ನು
ನಿರ್ಮಿಸಬೇಕಾಗಿದ್ದು, ಆ ನಿಟ್ಟಿನಲ್ಲಿ ನಮ್ಮ ಸರ್ಕಾರ ಹೆಜ್ಜೆ ಇಟ್ಟಿದೆ. ಸದೃಢ
ವ್ಯವಸ್ಥೆ ಕಟ್ಟಲು ಬದ್ಧರಾಗಿದ್ದೇವೆ ಎಂದು ಹೇಳಿದರು.
ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಘೋಷಣೆಯಾಗಿರುವ ಉಪಚುನಾವಣೆಯಲ್ಲಿ ಹೆಚ್ಚು ಕಡಿಮೆ ಎಲ್ಲ ಕ್ಷೇತ್ರದಲ್ಲಿ ಗೆಲ್ಲುವ ವಿಶ್ವಾಸವಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್
ಸಂಪೂರ್ಣ ಅಸ್ಥಿತ್ವ ಕಳೆದುಕೊಂಡಿದೆ. ನಾಯಕರ ನಡುವೆ ಆತಂರಿಕ ಭಿನ್ನಾಮತ
ಭುಗಿಲೆದಿದ್ದು, ತಮ್ಮೊಳಗೆ ಕಿತ್ತಾಡಿಕೊಳ್ಳುತ್ತಿದ್ದಾರೆ. ಮೈತ್ರಿ ಮಾಡಿಕೊಂಡು
ಕೆಟ್ಟ ಆಡಳಿತ ನೀಡಿದನ್ನು ಜನರು ಮರೆತಿಲ್ಲ ಎಂದರು.
ಕಾಂಗ್ರೆಸ್‌ನವರು ಸಮಾಜ ಒಡೆಯುವ ಕಾರ್ಯದಲ್ಲಿ ತೊಡಗಿದ್ದಾರೆಯೇ ಹೊರತು, ಉತ್ತಮ ಆಡಳಿತದ ಆಧಾರದಲ್ಲಿ ಮತ ಕೇಳುವ ನೈತಿಕತೆಯನ್ನು ಉಳಿಸಿಕೊಂಡಿಲ್ಲ. ಜನರ ಬೆಂಬಲ ಪಡೆಯುವ ಕಾರ್ಯದಲ್ಲಿ ಅವರು ತೊಡಗಿಕೊಂಡಿಲ್ಲ. ಸತ್ಯಕ್ಕೆ ದೂರವಾದ ಹೇಳಿಕೆ ಕೊಟ್ಟುಕೊಂಡು ಓಡಾಡುತ್ತಿದ್ದಾರೆ. ಉತ್ತಮ ಪ್ರತಿಪಕ್ಷವಾಗಿಯೂ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ದೂರಿದರು.
ಹಿಂದಿನ ಸರ್ಕಾರದ ಅವಧಿಯಲ್ಲಿ ಅತೀವೃಷ್ಟಿ ಹಾಗೂ ಅನಾವೃಷ್ಟಿ ಆದಂತಹ ವೇಳೆ ಯಾವುದೇ ಪ್ರವಾಸವನ್ನು ಕೈಗೊಂಡಿಲ್ಲ. ಪರಿಣಾಮಕಾರಿಯಾದ ಆಡಳಿತ ನೀಡುವಲ್ಲಿ ವಿಫಲರಾಗಿದ್ದರು. ನಾವು ನೆರೆ ಪರಿಹಾರ ವಿತರಣೆಯಲ್ಲಿ ತಪ್ಪು ಕಂಡು ಹಿಡಿಯಲು ಅವಕಾಶ ನೀಡಿಲ್ಲ. ಪ್ರತಿ ಮನೆ ಹಾಗೂ ವ್ಯಕ್ತಿಯನ್ನು ತಲುಪಿದ್ದೇವೆ. ಮೂಲ ಸೌಕರ್ಯಗಳ ಪುನರ್ ನಿರ್ಮಾಣದಲ್ಲಿ ಕೆಲವೊಂದು ಸವಾಲುಗಳಿವೆ. ಮಳೆಯಿಂದ ಹಾನಿಯಾಗಿರುವ ಭಾಗಗಳನ್ನು ಸರಿಪಡಿಸಲು ಸ್ವಲ್ಪ ಸಮಯ ಬೇಕಾಗುತ್ತದೆ. 40 ಸಾವಿರ ಮನೆಗಳಿಗೆ ತಲಾ 5 ಲಕ್ಷ ಪರಿಹಾರ ನೀಡಲಾಗಿದೆ.
ಇನ್ನುಉಳಿದಿರುವ ಪರಿಹಾರ ಕಾರ್ಯವನ್ನು ತ್ವರಿತವಾಗಿ ಮಾಡಲಾಗುವುದು ಎಂದು ಭರವಸೆ ನೀಡಿದರು. ಸಂಸದ ಬಚ್ಚೇಗೌಡ ಪುತ್ರ ಶರತ್ ಬಚ್ಚೇಗೌಡ ನೀಡಿದ ‘ಟಿಪ್ಪು ಜಯಂತಿ ಆಚರಣೆ ಮಾಡುತ್ತೇನೆ’ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ ಅವರು, ನಮ್ಮ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಯಾರು ಟಿಪ್ಪು ಜಯಂತಿ ಆಚರಣೆ ಮಾಡಲ್ಲ ಎಂದರು.