ಉನ್ನಾವೋ ಅತ್ಯಾಚಾರ ಪ್ರಕರಣ: ಉಚ್ಚಾಟಿತ ಬಿಜೆಪಿ ಶಾಸಕ ಕುಲದೀಪ್ ಸೆಂಗರ್ ದೋಷಿ- ತೀರ್ಪು

ನವ ದೆಹಲಿ: 2017ರಲ್ಲಿ ನಡೆದಿದ್ದ ಉನ್ನಾವೋ  ಅಪ್ರಾಪ್ತೆ ಬಾಲಕಿ ಅಪಹರಣ ಹಾಗೂ  ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಉಚ್ಚಾಟಿತ ಬಿಜೆಪಿ ಶಾಸಕ  ಕುಲದೀಪ್ ಸೆಂಗರ್ ದೋಷಿ ಎಂದು ದೆಹಲಿಯ ತೀಸ್ ಹಜಾರಿ ನ್ಯಾಯಾಲಯ ಇಂದು ತೀರ್ಪು ನೀಡಿದೆ.

ಮತ್ತೊಬ್ಬ ಆರೋಪಿ ಶಶಿ ಸಿಂಗ್ ಅವರನ್ನು ನಿರ್ದೋಷಿ ಎಂದು ಪರಿಗಣಿಸಿರುವ ನ್ಯಾಯಾಲಯ,  ಡಿಸೆಂಬರ್ 19 ರಂದು ಶಿಕ್ಷೆಯ ಪ್ರಮಾಣ ನಿಗದಿ ಕುರಿತ ವಿಚಾರಣೆ ನಡೆಸುವುದಾಗಿ ತಿಳಿಸಿದೆ. 

ಈ ತಿಂಗಳ ಆರಂಭದಿಂದಲೂ ನಡೆದ ಗೌಪ್ಯ ವಿಚಾರಣೆ ಪ್ರಕ್ರಿಯೆ ಮುಕ್ತಾಯಗೊಂಡ ಬಳಿಕ  ಜಿಲ್ಲಾ ನ್ಯಾಯಾಧೀಶ ಧರ್ಮೇಶ್ ಶರ್ಮಾ ಇಂದು ಈ  ತೀರ್ಪು ಪ್ರಕಟಿಸಿದ್ದಾರೆ. ಕಳೆದ ಏಳು ವರ್ಷಗಳ ಹಿಂದೆ ಇದೇ ದಿನ  ನಡೆದ ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣ ದೇಶದಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು.

ಅತ್ಯಾಚಾರ ಸಂತ್ರಸ್ಥೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರಾಗಿದ್ದ ರಂಜನ್ ಗೊಗೊಯ್ ಅವರಿಗೆ ಪತ್ರ ಬರೆದ ನಂತರ  ಲಖನೌನಿಂದ ರಾಷ್ಟ್ರ ರಾಜಧಾನಿಗೆ ಪ್ರಕರಣ ವರ್ಗಾವಣೆಗೊಂಡು ಪ್ರತಿದಿನ ವಿಚಾರಣೆ ನಡೆಸುವಂತೆ ಸುಪ್ರೀಂಕೋರ್ಟ್ ಆಗಸ್ಟ್ ತಿಂಗಳಲ್ಲಿ ಆದೇಶ ನೀಡಿತ್ತು. 

ಪ್ರತಿದಿನ ವಿಚಾರಣೆ ನಡೆಸುವಂತೆ ಹಾಗೂ 45 ದಿನಗಳೊಳಗೆ ವಿಚಾರಣೆ  ಪೂರ್ಣಗೊಳಿಸುವಂತೆ ದೆಹಲಿ ನ್ಯಾಯಾಲಯಕ್ಕೆ ನಿರ್ದೇಶನ ನೀಡಲಾಗಿತ್ತು. 2017ರಲ್ಲಿ ಸೆಂಗರ್ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಮಾಡಿದ ಆರೋಪ ಎದುರಿಸುತ್ತಿದ್ದಾರೆ. 

ಸೆಂಗರ್  ಉತ್ತರ ಪ್ರದೇಶದ ಬಂಗೆರ್ ಮಾವುನಿಂದ ನಾಲ್ಕು ಬಾರಿ ಬಿಜೆಪಿಯ ಶಾಸಕರಾಗಿದ್ದರು. 2019 ಆಗಸ್ಟ್ ತಿಂಗಳಲ್ಲಿ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟಿಸಲಾಗಿತ್ತು. 

ಬಿಜೆಪಿ ಉಚ್ಚಾಟಿತ ಶಾಸಕ ಸೆಂಗರ್  ಹಾಗೂ ಶಶಿ ಸಿಂಗ್ ವಿರುದ್ಧ ಐಪಿಸಿ ಸೆಕ್ಷನ್ 120 ಬಿ ( ಅಪರಾಧದ ಸಂಚು) 363 ( ಅಪಹರಣ) 376 ( ಅತ್ಯಾಚಾರ ) ಮತ್ತಿತರ  ಪೊಕ್ಸೊ ಕಾಯ್ದೆಯಡಿಯ ಸೆಕ್ಷನ್ ಅಡಿಯಲ್ಲಿ ಆಗಸ್ಟ್ 9 ರಂದು ನ್ಯಾಯಾಲಯಕ್ಕೆ ಜಾರ್ಜ್ ಶೀಟ್ ಸಲ್ಲಿಕೆ ಸಲ್ಲಿಕೆಯಾಗಿತ್ತು. ಪೊಕ್ಸೊ ಕಾಯ್ದೆಯಡಿ ಗರಿಷ್ಠ ಎಂದರೆ ಜೀವಾವಧಿ ಶಿಕ್ಷೆ ವಿಧಿಸಲು ಅವಕಾಶವಿದೆ. 

Leave a Reply

Your email address will not be published. Required fields are marked *

error: Content is protected !!