ಟ್ರಾಫಿಕ್ ದಂಡ ಕಡಿತಕ್ಕೆ ಕೇಂದ್ರ ಸಚಿವ ಗಡ್ಕರಿ ಅಸಮಾಧಾನ

ನವದೆಹಲಿ: ಸಂಚಾರಿ ನಿಯಮ ಉಲ್ಲಂಘನೆ ಮಾಡಿದವರಿಗೆ ನೂತನ ಮೋಟಾರು ಕಾಯ್ದೆಯಡಿ ವಿಧಿಸಲಾಗುತ್ತಿರುವ ದಂಡದ ಪ್ರಮಾಣವನ್ನು ಕಡಿತ ಮಾಡಿದ ಗುಜರಾತ್’ನ ಬಿಜೆಪಿ ಸರ್ಕಾರದ ಕ್ರಮದ ಬಗ್ಗೆ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿಯವರು ಬುಧವಾರ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. 

ನೂತನ ಮೋಟಾರು ಕಾಯ್ದೆಯಡಿ ತಂದ ನಿಯಮಗಳು ಹಣ ಮಾಡುವ ಉದ್ದೇಶದಿಂದ ರೂಪಿಸಿದ್ದಲ್ಲ, ಬದಲಾಗಿ ಲಕ್ಷಾಂತರ ಜನರ ಜೀವ ಉಳಿಸುವ ಉದ್ದೇಶವನ್ನು ಹೊಂದಿದೆ ಎಂದು ಹೇಳಿದ್ದಾರೆ. 

ಕೆಲ ದಿನಗಳ ಹಿಂದಷ್ಟೇ ಗುಜರಾತ್ ರಾಜ್ಯದ ಆಡಳಿತಾರೂಢ ಬಿಜೆಪಿ ಸರ್ಕಾರ, ರಾಜ್ಯದಲ್ಲಿ ನೂತನ ಮೋಟಾರು ಕಾಯ್ದೆಯಡಿ ವಿಧಿಸಲಾಗುವ ದಂಡದ ಪ್ರಮಾಣವನ್ನು ಶೇ.90ರವರೆಗೂ ಕಡಿತ ಮಾಡಿತ್ತು. 

ಯಾವುದೇ ರಾಜ್ಯದ ಹೆಸರನ್ನು ಪ್ರಸ್ತಾಪಿಸದೆಯೇ ಪ್ರತಿಕ್ರಿಯೆ ನೀಡಿರುವ ಗಡ್ಕರಿಯವರು, ಪ್ರತೀವರ್ಷ ರಸ್ತೆ ಅಪಘಾತಗಳಿಗೆ 1.50 ಲಕ್ಷ ಜನ ಬಲಿಯಾಗುತ್ತಿದ್ದಾರೆ. ಸುಮಾರು 2-3 ಲಕ್ಷ ಜನ ಅಪಘಾತದಲ್ಲಿ ತಮ್ಮ ಕಾಲುಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಅವರ ಬಗ್ಗೆ ನಿಮಗೆ ಚಿಂತೆ ಇಲ್ಲವೇ? ಎಂದು ಪ್ರಶ್ನಿಸಿದ್ದಾರೆ. 

ಹೊಸ ನಿಯಮವು ಸಂಚಾರಿ ನಿಯಮ ಉಲ್ಲಂಘನೆಗೆ ಕಡಿವಾಣ ಹಾಕುವ ಉದ್ದೇಶ ಹೊಂದಿದೆಯೇ ಹೊರತು, ಇದೇನು ಆದಾಯ ಸಂಗ್ರಹದ ಯೋಜನೆಯಲ್ಲ. ಎಲ್ಲಾ ರಾಜ್ಯಗಳು ತಮಿಳುನಾಡನ್ನು ನೋಡಿ ಕಲಿಯಬೇಕು. ಅಲ್ಲಿ ಹೊಸ ನಿಯಮ ಜಾರಿಯಾದ ಬಳಿಕ ತಮಿಳುನಾಡಲ್ಲಿ ಅಪಘಾತದ ಪ್ರಮಾಣದಲ್ಲಿ ಶೇ.28ರಷ್ಟು ಇಳಿಕೆಯಾಗಿದೆ. ಹೊಸ ನಿಯಮ ಜಾರಿ ಬಳಿಕ ಸಾಕಷ್ಟು ಬದಲಾವಣೆಗಳು ಕಂಡು ಬರುತ್ತಿದೆ ಎಂದಿದ್ದಾರೆ. 

Leave a Reply

Your email address will not be published. Required fields are marked *

error: Content is protected !!