ಕೇಂದ್ರ ಗೃಹ ಸಚಿವರನ್ನು ಮೊದಲು ಬಂಧಿಸಬೇಕು: ಪ್ರಗತಿಪರ ಹೋರಾಟಗಾರ ಶಿವಸುಂದರ್‌

ಉಡುಪಿ: ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯಿದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಮುಸ್ಲಿಮರಿಗೆ ನೇರವಾಗಿ ಚೂರಿ ಹಾಕಿದರೆ, ಹಿಂದೂಗಳಿಗೆ ಬೆನ್ನಿಗೆ ಚೂರಿ ಹಾಕುತ್ತದೆ ಎಂದು ಅಂಕಣಕಾರ, ಪ್ರಗತಿಪರ ಹೋರಾಟಗಾರ ಶಿವಸುಂದರ್‌ ದೂರಿದರು.

ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ವಿರೋಧಿಸಿ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಹಾಗೂ ಸಹಭಾಗಿ ಸಂಘಟನೆಗಳ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಆಯೋಜಿಸಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.

‘ಕೇಂದ್ರ ಸರ್ಕಾರ ದೇಶದ ಜನರನ್ನು ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದೆ. ಸಂವಿಧಾನ ವಿರೋಧಿ ಕಾನೂನುಗಳನ್ನು ಜಾರಿಗೊಳಿಸುವ ಮೂಲಕ ದೇಶದ ಜನರ ಮೇಲೆ ಆಡಳಿತಾರೂಢ ಸರ್ಕಾರ ಯುದ್ಧ ಸಾರಿದೆ. ಈ ದಾಳಿ ಕೇವಲ ಮುಸ್ಲಿಮರ ಮೇಲೆ ಅಲ್ಲ. ದೇಶದ ಆತ್ಮದ ಮೇಲೆ, ಸಂವಿಧಾನದ ಮೇಲೆ ಹಾಗೂ ಮುಸ್ಲಿಮರೇತರ ಮೇಲೆ ಮಾಡಿದ ದಾಳಿ’ ಎಂದು ಕಿಡಿಕಾರಿದರು.

‘ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮುಖ್ಯಸ್ಥರು ಕಾಯಿದೆಯ ಬಗ್ಗೆ ಅಧ್ಯಯನ ಮಾಡಿ, ಇದು ಮೂಲಭೂತ ತಾರತಮ್ಯ ಎಸಗುವ ಕಾಯಿದೆ. ಇದನ್ನು ನಾಗರಿಕ ಸಮಾಜದಲ್ಲಿ ಅನುಷ್ಠಾನಗೊಳಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದು ದೇಶವನ್ನು ಒಡೆಯುವ, ದೇಶಕ್ಕೆ ಬೆಂಕಿ ಹಚ್ಚುವ ಕಾಯಿದೆ ಎಂದು ಅಧ್ಯಯನಶೀಲ ವಿವಿಯ ವಿದ್ಯಾರ್ಥಿಗಳು ಹೇಳುತ್ತಿದ್ದಾರೆ. ಹಾಗಾಗಿ ಇದು ಮುಸ್ಲಿಮರ ಹೋರಾಟ ಅಲ್ಲ. ದೇಶವನ್ನು ಉಳಿಸುವ ಸ್ವಾತಂತ್ರ್ಯ ಸಂಗ್ರಾಮ’ ಎಂದು ಹೇಳಿದರು.

‘ಈ ಕಾಯಿದೆಯ ಬಗ್ಗೆ ತಪ್ಪು ಮಾಹಿತಿ ಕೊಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಕಾನೂನಿನಲ್ಲಿದೆ. ಹಾಗಾದರೆ ಭಾರತೀಯರ ಶಾಂತಿ ಭಂಗ ಮಾಡಿದ ಕೇಂದ್ರ ಗೃಹ ಸಚಿವರನ್ನು ಮೊದಲು ಬಂಧಿಸಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಯಾಸೀನ್ ಮಲ್ಪೆ ಮಾತನಾಡಿ, ‘ಇದು ಭಾರತೀಯರನ್ನು ಧರ್ಮದ ಹೆಸರಿನಲ್ಲಿ ಧ್ರುವೀಕರಣ ಮಾಡಲು ಮಾಡಿದ ಕಾನೂನು. ಕೇಂದ್ರ ಸರ್ಕಾರ ಸಂವಿಧಾನ ವಿರೋಧಿ ಕಾನೂನುಗಳನ್ನು ಜಾರಿಗೊಳಿಸಿ, ಮುಸ್ಲಿಂ ಸಮುದಾಯದೊಳಗೆ ಭಯ, ಭೀತಿಯ ವಾತಾವರಣ ಸೃಷ್ಟಿಸುತ್ತಿದೆ. ಮುಸ್ಲಿಮರ ಬಗ್ಗೆ ದ್ವೇಷ ಹುಟ್ಟಿಸಲು ಪೌರತ್ವ ತಿದ್ದುಪಡಿಯಂತಹ ಕಾನೂನುಗಳನ್ನು ರೂಪಿಸುತ್ತಿದೆ’ ಎಂದು ಆರೋಪಿಸಿದರು.

‘ಧರ್ಮ, ಜಾತಿ, ಭಾಷೆಯ ಆಧಾರದಲ್ಲಿ ತಾರತಮ್ಯ ಮಾಡಬಾರದೆಂದು ಈ ದೇಶದ ಸಂವಿಧಾನ ಹೇಳುತ್ತದೆ. ಆದರೆ ಈ ಕಾಯಿದೆಯಿಂದ ನಮ್ಮನ್ನು ಯಾಕೆ ಹೊರಗಿಟ್ಟಿದ್ದೀರಿ?. ಆಕ್ರಮ ನುಸುಳುಕೋರರಿದ್ದರೆ, ಅವರನ್ನು ಹೊರ ಹಾಕಲು ಸಾಕಷ್ಟು ಕಾನೂನು ಕ್ರಮಗಳಿವೆ. ಅದನ್ನು ಬಿಟ್ಟು ಪ್ರತಿಯೊಬ್ಬ ಭಾರತೀಯರನ್ನೂ ನೀವು ನುಸುಳು
ಕೋರರೆಂದು ಕೇಳುವುದು ಮೂರ್ಖ ರಾಜನ ಸಿದ್ಧಾಂತ’ ಎಂದು ಲೇವಡಿ ಮಾಡಿದರು.

‘ದೇಶದಲ್ಲಿ ಸಂವಿಧಾನದ ಆಶಯಗಳು ಜೀವಂತವಾಗಿದ್ದರೆ ಕೂಡಲೇ ಈ ಕಾಯಿದೆಯನ್ನು ವಾಪಸ್‌ ಪಡೆಯಬೇಕು. ಇಲ್ಲದಿದ್ದರೆ ದೇಶದ 130 ಕೋಟಿ ಜನರು ಇದಕ್ಕೆ ತಕ್ಕ ಉತ್ತರ ನೀಡುತ್ತಾರೆ. ರಾಷ್ಟ್ರೀಯ ಪೌರತ್ವ ನೋಂದಣಿಯಡಿ ನನ್ನನ್ನು ಸಾಬೀತು ಮಾಡಲು ಹೇಳಿದರೆ, ನಾನು ಖಂಡಿತ ಸಾಬೀತು ಮಾಡುವುದಿಲ್ಲ. ನನ್ನನ್ನು ಜೈಲಿಗೆ ಬೇಕಾದರು ಹಾಕಲಿ’ ಎಂದು ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದರು.

ಮಾಜಿ ಸಚಿವ ವಿನಯಕುಮಾರ್‌ ಸೊರಕೆ, ಮಾಜಿ ಶಾಸಕ ಯು.ಆರ್‌.ಸಭಾಪತಿ, ದಲಿತ ಮುಖಂಡ ಸುಂದರ್‌ ಮಾಸ್ತರ್‌, ಸಿಪಿಎಂ ಮುಖಂಡ ಬಾಲಕೃಷ್ಣ ಶೆಟ್ಟಿ, ಪಿಎಐ ಕುಂದಾಪುರ ಕೌನ್ಸಿಲ್‌ ಸದಸ್ಯ ಮೌಲಾನಾ ಮೌಹಝಂ ಅಲಿ, ಮೌಲಾನ ತೌಫೀಕ್‌ ಮಾತನಾಡಿದರು.

ಅಮೃತ್‌ ಶೆಣೈ, ರಮೇಶ್‌ ಕಾಂಚನ್‌, ವರೋನಿಕಾ ಕರ್ನೆಲಿಯೋ, ಒಕ್ಕೂಟದ ಹಿರಿಯ ಉಪಾಧ್ಯಕ್ಷ ಅಬ್ದುಲ್ಲಾ ಪರ್ಕಳ, ಮಾಜಿ ಅಧ್ಯಕ್ಷ ಎಂ.ಪಿ. ಮೊದಿನಬ್ಬ, ಜಮಾಅತೆ ಇಸ್ಲಾಮೀ ಹಿಂದ್‌ನ ಜಿಲ್ಲಾಧ್ಯಕ್ಷ ಶಬ್ಬೀರ್‌ ಮಲ್ಪೆ, ಜಮೀಯ್ಯತುಲ್‌ -ಲಾಹ್‌ನ ಕಾಸಿಂ ಬಾರಕೂರು, ಎಸ್‌ಐಒ ಜಿಲ್ಲಾಧ್ಯಕ್ಷ ಅಫ್ವಾನ್‌ ಹೂಡೆ, ಎಸ್‌ಎಸ್‌ಎ-ನ ಶಿಹಾನ್‌ ಹೂಡೆ, ವೆಲ್‌ಫೇರ್‌ ಪಾರ್ಟಿಯ ಜಿಲ್ಲಾಧ್ಯಕ್ಷ ಅಬ್ದುಲ್‌ ಅಝೀಝ್‌ ಉದ್ಯಾವರ, ಪಿಎ-ಐ ಜಿಲ್ಲಾಧ್ಯಕ್ಷ ನಝೀರ್‌ ಅಂಬಾಗಿಲು, ಪ್ರತಿಭಟನಾ ಸಂಚಾಲಕ ಹುಸೇನ್‌ ಕೋಡಿಬೆಂಗ್ರೆ ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ಜಗದೀಶ್‌ ಅವರಿಗೆ ಮನವಿ ಸಲ್ಲಿಸಲಾಯಿತು.

ದೇಶ ಆಳಲು ತಿಳಿಯದವರು.

‘ಪ್ರಧಾನಿ ಮೋದಿ ಹಾಗೂ ಅಮಿತ್‌ ಶಾಗೆ ದೇಶ ಆಳಲು ಬರುವುದಿಲ್ಲ. ಇವರು ದೇಶ ಆಳಲು ಅನರ್ಹರು. ದೇಶ ಆರ್ಥಿಕ ಪರಿಸ್ಥಿತಿ ದಿವಾಳಿ ಆಗಿದೆ. ಸರ್ಕಾರಿ ಸೌಮ್ಯದ ಸಂಸ್ಥೆಗಳನ್ನು ಮಾರಾಟ ಮಾಡುತ್ತಿದ್ದಾರೆ. ಭಾರತೀಯ ರೂಪಾಯಿ ಮೌಲ್ಯ ಪಾತಾಳಕ್ಕೆ ಕುಸಿದಿದೆ. ಜಿಡಿಪಿ ನಿರಂತರವಾಗಿ ಕುಸಿಯುತ್ತಿದೆ. ದೇಶದ ಇಂದಿನ ಜ್ವಲಂತ ಸಮಸ್ಯೆಗಳನ್ನು ಮರೆಮಾಚಲು ಪೌರತ್ವ ತಿದ್ದುಪಡಿ, ಎನ್‌ಆರ್‌ಸಿ ಅಸ್ತ್ರ ಬಿಟ್ಟಿದ್ದಾರೆ. ಹಿಂದೂ ಮತ್ತು ಮುಸ್ಲಿಮರನ್ನು ಧರ್ಮದ ಹೆಸರಿನಲ್ಲಿ ಒಡೆದು ತಮ್ಮ ರಾಜಕೀಯ ಬೆಳೆ ಬೇಯಿಸಿಕೊಳ್ಳುತ್ತಿದ್ದಾರೆ’ ಎಂದು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಯಾಸೀನ್ ಮಲ್ಪೆ ಆಕ್ರೋಶ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

error: Content is protected !!