ಮುಗಿಯದ ರಾಜೀನಾಮೆ ಪ್ರಹಸನ
ಬೆಂಗಳೂರು: ದೋಸ್ತಿ ಸರ್ಕಾರದ ಮತ್ತೆರೆಡು ವಿಕೆಟ್ ಪತನವಾಗಿದೆ. ಶಾಸಕ ಸುಧಾಕರ್ ಮತ್ತು ಸಚಿವ ಎಂಟಿಬಿ ನಾಗರಾಜ್ ದಿಢೀರ್ ಅಂತ ವಿಧಾನಸೌಧದ ಸ್ಪೀಕರ್ ಕಚೇರಿಗೆ ಆಗಮಿಸಿ ರಮೇಶ್ ಕುಮಾರ್ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ.
ಎಂಟಿಬಿ ನಾಗರಾಜ್ ಮತ್ತು ಶಾಸಕ ಸುಧಾಕರ್ ರಾಜೀನಾಮೆ ನೀಡಿದ್ದು, ಸಮ್ಮಿಶ್ರ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ. ರಾಜ್ಯಪಾಲರ ಭೇಟಿ ಬಳಿಕ ಮಾತನಾಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಂದು ಸಂಜೆಯೊಳಗೆ ಇನ್ನಿಬ್ಬರು ರಾಜೀನಾಮೆ ನೀಡ್ತಾರೆ ಎಂದು ಮುನ್ಸೂಚನೆ ನೀಡಿದ್ದರು.

ಇಂದು ಬೆಳಗ್ಗೆ ಮಾತನಾಡಿದ್ದ ಎಂಟಿಬಿ ನಾಗರಾಜ್, ಮೈತ್ರಿ ಸರ್ಕಾರದಲ್ಲಿನ ಜೆಡಿಎಸ್ನವರ ಸರ್ವಾಧಿಕಾರಿ ಧೋರಣೆಯೇ ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಹಾಗೂ ಸಚಿವ ಹೆಚ್.ಡಿ ರೇವಣ್ಣರಿಂದಲೇ ಮೈತ್ರಿ ಸರ್ಕಾರಕ್ಕೆ ಈ ದುಸ್ಥಿತಿ ಬಂದಿದೆ ಎಂದು ಬಹಿರಂಗವಾಗಿಯೇ ಟೀಕಿಸಿದ್ದರು.
ಜೆಡಿಎಸ್ ನವರು ಮೈತ್ರಿ ಧರ್ಮ ಪಾಲಿಸುತ್ತಿಲ್ಲ. ಕಾಂಗ್ರೆಸ್ ಶಾಸಕರಿಗೆ ಅನುದಾನ ನೀಡುತ್ತಿಲ್ಲ. ಅವರಿಗೆ ಇಷ್ಟ ಬಂದಂತೆ ವರ್ಗಾವಣೆ ಮಾಡುತ್ತಿದ್ದಾರೆ. ಹೀಗಾಗಿ ಸಿಎಂ ಅವರ ಆಡಳಿತದಿಂದ ಬೇಸತ್ತು ಅತೃಪ್ತರು ಪಕ್ಷದಿಂದ ಹೊರ ಹೋಗಿದ್ದಾರೆ. ಸಿಎಂ ಹೇಳೋದು ಒಂದು, ಮಾಡೋದು ಇನ್ನೊಂದು. ರೇವಣ್ಣ ಅವರ ಮಾತು ಕೇಳಿಯೇ ಸಿಎಂ ಕೆಟ್ಟರು. ಮೈತ್ರಿ ಸರ್ಕಾರದಲ್ಲಿನ ಜೆಡಿಎಸ್ನವರ ಸರ್ವಾಧಿಕಾರಿ ಧೋರಣೆಯೇ ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದೆ ಎಂದು ವಾಗ್ದಾಳಿ ನಡೆಸಿದ್ದರು.

ರಾಜೀನಾಮೆ ಕೊಟ್ಟ ಜೆಡಿಎಸ್ ಶಾಸಕರು:
* ಎಚ್ ವಿಶ್ವನಾಥ್- ಹುಣಸೂರು
* ಗೋಪಾಲಯ್ಯ- ಮಾಹಾಲಕ್ಷ್ಮಿ ಲೇ ಔಟ್
* ನಾರಾಯಣ ಗೌಡ- ಕೆ. ಆರ್ ಪೇಟೆ
ರಾಜೀನಾಮೆ ಕೊಟ್ಟ ಕೈ ಶಾಸಕರು:
* ರಾಮಲಿಂಗಾ ರೆಡ್ಡಿ- ಬಿಟಿಎಂ ಲೇ ಔಟ್
* ರಮೇಶ್ ಜಾರಕಿಹೊಳಿ- ಗೋಕಾಕ್
* ಎಸ್.ಟಿ ಸೋಮಶೇಖರ್- ಯಶವಂತಪುರ
* ಪ್ರತಾಪ್ ಗೌಡ ಪಾಟೀಲ್- ಮಸ್ಕಿ
* ಬಿ.ಸಿ ಪಾಟೀಲ್- ಹಿರೇಕೆರೂರು
* ಮಹೇಶ್ ಕುಮಟಳ್ಳಿ- ಅಥಣಿ
* ಭೈರತಿ ಬಸವರಾಜ್- ಕೆ.ಆರ್ ಪುರಂ
* ಶಿವರಾಂ ಹೆಬ್ಬಾರ್- ಯಲ್ಲಾಪುರ
* ಮುನಿರತ್ನ- ರಾಜರಾಜೇಶ್ವರಿ ನಗರ
* ರೋಷನ್ ಬೇಗ್- ಶಿವಾಜಿನಗರ
* ಎಂಟಿಬಿ ನಾಗರಾಜ್- ಹೊಸಕೋಟೆ
* ಸುಧಾಕರ್- ಚಿಕ್ಕಬಳ್ಳಾಪುರ