ಉದ್ಯಾವರ: ಸಂತ ಫ್ರಾನ್ಸಿಸ್ ಕ್ಸೇವಿಯರ್ ದೇವಾಲಯ ಡಿ.3-4 ವಾರ್ಷಿಕ ಮಹೋತ್ಸವ

ಉಡುಪಿ : ಉದ್ಯಾವರದ ಸಂತ ಫ್ರಾನ್ಸಿಸ್ ಕ್ಸೇವಿಯರ್ ದೇವಾಲಯದ ವಾರ್ಷಿಕ ಮಹೋತ್ಸವ “ಸಾಂತ್ಮಾರಿ” ಹಬ್ಬವು ಡಿಸೆಂಬರ್ ತಿಂಗಳ 3 ಮತ್ತು 4 ನೇ ತಾರೀಕಿನಂದು ವಿಜೃಂಭಣೆಯಿಂದ ನಡೆಯಲಿದೆ.


ಡಿಸೆಂಬರ್ 1 ರಂದು ಸಂಜೆ 5ಗಂಟೆಗೆ ದೇವಾಲಯದಲ್ಲಿ ಪರಮಪ್ರಸಾದ ಭವ್ಯ ಮೆರವಣಿಗೆ ಮತ್ತು ಸಹಬಾಳ್ವೆ ಅಥವಾ ಭಾತೃತ್ವದ ದಿನ ಆಚರಣೆ ಮಾಡಲಾಗುತ್ತದೆ. ಪೂಜಾ ವಿಧಿಗಳ ನೇತೃತ್ವವನ್ನು ಮೂಡುಬೆಳ್ಳೆ ದೇವಾಲಯದ ಸಹಾಯಕ ಧರ್ಮಗುರು ವಂದನೀಯ ಫಾ. ಜಿತೇಶ್ ಕಾಸ್ತೆಲಿನೋ ನಡೆಸಲಿದ್ದಾರೆ.  ವಾರ್ಷಿಕ ಮಹೋತ್ಸವದ ಮುನ್ನಾ ದಿನ ಅಂದರೆ ಮಂಗಳವಾರ ಸಂಜೆ 7 ಗಂಟೆಗೆ ಉಡುಪಿ ಮದರ್ ಆಫ್ ಸಾರೋಸ್ ದೇವಾಲಯದ ಸಹಾಯಕ ಧರ್ಮಗುರು ವಂದನೀಯ ಫಾ. ಸ್ಟೀವನ್ ಫೆರ್ನಾಂಡಿಸ್ ನೇತೃತ್ವದಲ್ಲಿ ಸಂಜೆಯ ಪ್ರಾರ್ಥನಾ ವಿಧಿಗಳು ನಡೆಯಲಿವೆ. ಡಿಸೆಂಬರ್ 4 ರಂದು ವಾರ್ಷಿಕ ಮಹೋತ್ಸವದ ದಿನ. ಬೆಳಿಗ್ಗೆ 10.30  ಕ್ಕೆ ವಾರ್ಷಿಕ ಮಹೋತ್ಸವ ಸಾಂತ್ಮಾರಿ ಹಬ್ಬದ ದಿವ್ಯ ಬಲಿಪೂಜೆ ನಡೆಯಲಿದೆ. ಪಲಿಮಾರು ದೇವಾಲಯದ ಧರ್ಮಗುರು ವಂದನೀಯ ಫಾ. ಡಾ. ರಾಕ್ ಡಿಸೋಜ ಸಂಭ್ರಮದ ಬಲಿಪೂಜೆಯ ನೇತೃತ್ವವನ್ನು ವಹಿಸಲಿದ್ದಾರೆ. ವಲಯದ ಸಹಿತ ಧರ್ಮಪ್ರಾಂತ್ಯದ ಹಲವಾರು ಧರ್ಮಗುರುಗಳು ಈ ಸಂಭ್ರಮದಲ್ಲಿ ಭಾಗಿಯಾಗಲಿದ್ದಾರೆ.


150 ವರ್ಷಗಳ ಇತಿಹಾಸ ಹೊಂದಿರುವ ಸಂತ ಫ್ರಾನ್ಸಿಸ್ ಜೇವಿಯರ್ ದೇವಾಲಯವು, ಮೂರು ವರ್ಷಗಳ ಹಿಂದೆ ನವೀಕೃತ ಗೊಂಡಿದ್ದು, ಪ್ರಸ್ತುತ ದೇವಾಲಯದ ವ್ಯಾಪ್ತಿಯಲ್ಲಿ 530 ಕ್ರೈಸ್ತ ಕುಟುಂಬಗಳು ಒಳಗೊಂಡಿವೆ. ಉಡುಪಿ ಧರ್ಮ ಪ್ರಾಂತ್ಯದ ಕುಲಪತಿಗಳಾಗಿರುವ ವಂದನೀಯ ಫಾ. ಸ್ಟ್ಯಾನಿ ಬಿ ಲೋಬೊ ಪ್ರಧಾನ ಧರ್ಮಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದು, ಸಹಾಯಕ ಧರ್ಮಗುರುಗಳಾಗಿ ವಂದನೀಯ ಫಾ. ರಾಲ್ವಿನ್ ಅರಾನ್ನ ಸೇವೆಯನ್ನು ಸಲ್ಲಿಸುತ್ತಿದ್ದಾರೆ. 
ರಾಷ್ಟ್ರೀಯ ಹೆದ್ದಾರಿ 66 ರ ಬಳಿಯಲ್ಲಿ ಇರುವ ಸಂತ ಫ್ರಾನ್ಸಿಸ್ ಜೇವಿಯರ್ ದೇವಾಲಯದ ವಠಾ ರವು ಸೌಹಾರ್ದತೆಯಿಂದ ಕೂಡಿದ್ದು, ಜಾತಿ ಮತ ಬೇಧವಿಲ್ಲದೆ ವಾರ್ಷಿಕ ಮಹೋತ್ಸವದ ಸಂಭ್ರಮಾಚರಣೆಯಲ್ಲಿ ಸಾವಿರಾರು ಜನರು ಭಾಗವಹಿಸುತ್ತಾರೆ. ಹಲವಾರು ಭಕ್ತರು ಮೇಣದ ಬತ್ತಿಯನ್ನು ಹತ್ತಿಸಿಕೊಂಡು ದೇವರಿಗೆ ಹರಕೆ ಮತ್ತು ಕೃತಜ್ಞತೆ ಸಲ್ಲಿಸುತ್ತಾರೆ. ಹಬ್ಬದ ಎರಡು ದಿನಗಳಲ್ಲಿ ಐಸಿವೈಎಂ ಸಂಘಟನೆಯು ವಿವಿಧ ಸ್ಪರ್ಧೆಗಳನ್ನು ಸಾರ್ವಜನಿಕರಿಗೆ ಹಮ್ಮಿಕೊಂಡು ಮನರಂಜನೆಯನ್ನು ನೀಡಲಿದೆ.


ಹಬ್ಬದ ಪ್ರಯುಕ್ತ ಈಗಾಗಲೇ ಸಂತ ಫ್ರಾನ್ಸಿಸ್ ಜೇವಿಯರ್ ದೇವಾಲಯವು ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದ್ದು, ದಾಮಸ್ಕಟ್ಟೆ ಕಿರೆಯ ರೇಷ್ಮಾ ಸೌಂಡ್ಸ್ ಆ್ಯಂಡ್ ಲೈಟ್ಸ್ ಸಂಸ್ಥೆ ದೇವಾಲಯಕ್ಕೆ ವಿಶೇಷ ಮತ್ತು ವಿನೂತನ ರೀತಿಯ ವಿದ್ಯುತ್ ದೀಪಗಳ ಅಲಂಕಾರವನ್ನು ಮಾಡಿದೆ.
ಡಿಸೆಂಬರ್ 4 ರಂದು ಸಂಜೆ 7 ಗಂಟೆಗೆ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿರುವ ಈ ದೇವಾಲಯದ ಐಸಿವೈಎಂ ಯುವ ಸಂಘಟನೆಯು ಮಂಗಳೂರಿನ ಖ್ಯಾತ ಕಲಾವಿದರನ್ನೊಳಗೊಂಡ ‘ಗುಟ್ಟು ಗೊತ್ತಾಂಡ್’ ಎನ್ನುವ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ.

Leave a Reply

Your email address will not be published. Required fields are marked *

error: Content is protected !!