ಉದ್ಯಾವರ ಗ್ರಾಮೀಣ ಕಾಂಗ್ರೆಸ್ : ಮೊದಲ ಹಂತದ 2 ಟನ್ ಅಕ್ಕಿ ಮತ್ತು ದಿನಸಿ ವಸ್ತು ವಿತರಣೆ

ಉದ್ಯಾವರ : ಕಾಪು ಬ್ಲಾಕ್ ಕಾಂಗ್ರೆಸ್ ಕೊಡಮಾಡಿದ 2 ಟನ್ ಅಕ್ಕಿ ಮತ್ತು ಉದ್ಯಾವರ ಗ್ರಾಮೀಣ ಕಾಂಗ್ರೆಸ್ ದಾನಿಗಳ ಸಹಾಯದಿಂದ ಸಂಗ್ರಹಿಸಿದ 60 ಸಾವಿರ ಬೆಲೆ ಬಾಳುವ  ದಿನಸಿ ವಸ್ತುಗಳನ್ನು 200 ಕುಟುಂಬಗಳಿಗೆ ಮೊದಲ ಹಂತದಲ್ಲಿ ಇಂದು ಹಸ್ತಾಂತರಿಸಲಾಯಿತು.

 
ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸರಳ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆ, ಕಾಪು ಕ್ಷೇತ್ರದಲ್ಲಿ ಜಿಲ್ಲಾಡಳಿತದ ತೀರ್ಮಾನಕ್ಕೆ ಬದ್ಧರಿದ್ದು, ವಲಸೆ ಕಾರ್ಮಿಕರಿಗೆ, ಅಗತ್ಯವಿರುವವರಿಗೆ, ಬಡವರಿಗೆ ಮತ್ತು ಬಾಡಿಗೆ ಮನೆಯಲ್ಲಿರುವವರಿಗೆ ಅಕ್ಕಿ ಸಹಿತ ದಿನ ಉಪಯೋಗಿ ವಸ್ತುಗಳನ್ನು ನೀಡಿ ಸಹಕಾರ ನೀಡುತ್ತಿದ್ದೇವೆ. ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮೀಣ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಆಡಳಿತವಿರುವ ಪಂಚಾಯಿತಿಗಳ ನೇತೃತ್ವದಲ್ಲಿ ಜಾತಿ, ಮತ ಮತ್ತು ಪಕ್ಷ ಭೇದವಿಲ್ಲದೆ ಹಾಲು ತರಕಾರಿ ಅಕ್ಕಿ ವಿತರಣೆ ಮಾಡುತ್ತಿದ್ದೇವೆ.

ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ 12 ಸಾವಿರ ಕಿಟ್ ಗಳನ್ನು ವಿತರಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಸಹಕಾರ ನೀಡುವುದಾಗಿ ತಿಳಿಸಿದರು. 
ಈಗಾಗಲೇ ಪಲಿಮಾರು ಮಠ, ಅದಮಾರು ಮಠ, ಪುತ್ತಿಗೆ ಮಠದ ಸ್ವಾಮೀಜಿ ಅವರಲ್ಲಿ ಮನವಿ ಮಾಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚುವರಿ ಕಿಟ್ ವಿತರಿಸುವ ಯೋಜನೆಯಿದೆ. ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 50 ಟನ್ ಅಕ್ಕಿ ವಿತರಿಸುವ ಯೋಜನೆಯನ್ನು ಹಾಕಿಕೊಂಡಿದ್ದು, ಈಗಾಗಲೇ 37 ಟನ್ ವಿತರಿಸಲಾಗಿದೆ. ಜಿಲ್ಲಾ, ಬ್ಲಾಕ್ ಮತ್ತು ಗ್ರಾಮೀಣ ಕಾಂಗ್ರೆಸ್ ಗಳು ಜತೆಯಾಗಿ ಹೊಂದಾಣಿಕೆಯೊಂದಿಗೆ ಕೆಲಸವನ್ನು ಮಾಡುತ್ತಿದ್ದು, ಕಷ್ಟದಲ್ಲಿರುವವರಿಗೆ ಸ್ಪಂದಿಸುತ್ತಿದೆ ಎಂದರು.

ಅದರಲ್ಲೂ ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಎಲ್ಲರಿಗೂ ಮಾದರಿಯಾಗಿದ್ದು, ದಾನಿಗಳ ಸಹಕಾರದೊಂದಿಗೆ ಒಂಬತ್ತು ಬಗೆಯ ವಿವಿಧ ದಿನಸಿ ವಸ್ತುಗಳನ್ನು ಅಕ್ಕಿಯ ಜೊತೆಗೆ ವಿತರಿಸಿದೆ ಎಂದರು. ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಉದ್ಯಾವರ ಗ್ರಾಮದ 13 ವಾರ್ಡ್ಗಳ, ವಾರ್ಡ್ ಅಧ್ಯಕ್ಷರು ಮತ್ತು  ಗ್ರಾಮ ಪಂಚಾಯತ್ ಸದಸ್ಯರುಗಳ ಮೂಲಕ ಅತಿ ಅಗತ್ಯವಿರುವವರಿಗೆ ಕಿಟ್ ಗಳನ್ನು ಹಸ್ತಾಂತರಿಸಿದರು.

ಕಾರ್ಯಕ್ರಮದಲ್ಲಿ ಕಾಪು ಬ್ಲಾಕ್ ಕಾಂಗ್ರೆಸ್ ಉತ್ತರ ವಲಯದ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಗಂಧಿ ಶೇಖರ್, ಉಪಾಧ್ಯಕ್ಷ ರಿಯಾಜ್ ಪಳ್ಳಿ, ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ಕುಮಾರ್, ಲಾರೆನ್ಸ್ ಡೇಸಾ ಉಪಸ್ಥಿತರಿದ್ದರು.
ಉದ್ಯಾವರ ಗ್ರಾಮೀಣ ಕಾಂಗ್ರೆಸ್ ನ ಮಾಜಿ ಅಧ್ಯಕ್ಷ ನಾಗೇಶ್ ಕುಮಾರ್ ಉದ್ಯಾವರ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬಿದಲಿ ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ಸಮರ್ಪಿಸಿದರು

Leave a Reply

Your email address will not be published. Required fields are marked *

error: Content is protected !!