2ನೇ ಅವಧಿಗೆ ಸಿಎಂ ಆಗಿ ಯೋಗಿ ಆದಿತ್ಯನಾಥ್ ಪದಗ್ರಹಣ- ಪ್ರಧಾನಿ, ಪೇಜಾವರಶ್ರೀ ಸಹಿತ ಹಲವು ಗಣ್ಯರ ಉಪಸ್ಥಿತಿ
ಲಖನೌ: ಇತ್ತೀಚಿಗೆ ನಡೆದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದ ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಯೋಗಿ ಆದಿತ್ಯನಾಥ್ ಸತತ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಶುಕ್ರವಾರ ಪದಗ್ರಹಣ ಮಾಡಿದರು.
ಅಟಲ್ ಬಿಹಾರ ವಾಜಪೇಯಿ ಎಕನಾ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಯೋಗಿ ಆದಿತ್ಯನಾಥ್ ಈಶ್ವರನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಪ್ರಮಾಣ ವಚನ ಸಮಾರಂಭದಲ್ಲಿ ಪೇಜಾವರ ಶ್ರೀವಿಶ್ವ ಪ್ರಸನ್ನ ತೀರ್ಥರು ವಿಶೇಷ ಆಹ್ವಾನಿತರಲ್ಲಿ ಒಬ್ಬರಾಾಗಿ ಪಾಲ್ಗೊಂಡರು. ರಾಜ್ಯದಿಂದ ಆದಿಚುಂಚನಗಿರಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಇಸ್ಕಾನ್ ನ ಮಧುಪಂಡಿತ ದಾಸ್ ಕೂಡಾ ಆಗಮಿಸಿದ್ದರು. ದೇಶಾದ್ಯಂತ ಅನೇಕ ನೂರಾರು ಸಾಧು ಸಂತರನ್ನು ಆಮಂತ್ರಿಸಲಾಗಿದ್ದು ಅವರ ಆತಿಥ್ಯಕ್ಕಾಗಿ ಹಿರಿಯ ಅಧಿಕಾರಿಗಳಾದ ಅವನೀಶ್ ಅವಸ್ಥಿ, ಆರ್ ಪಿ ಸಿಂಗ್, ಅಶೋಕ್ ತಿವಾರಿ, ಆರ್ ಬಿಎಸ್ ರಾವತ್ ಮೊದಲಾದವರ ನೇತೃತ್ವದಲ್ಲಿ ಪ್ರತ್ಯೇಕ ತಂಡ ರಚಿಸಿ ಸುವ್ಯವಸ್ಥೆಯ ಆಸ್ಥೆ ವಹಿಸಲಾಗಿತ್ತು. ಸಮಾರಂಭದಲ್ಲೂ ಮಠಾಧೀಶರು ಸ್ವಾಮೀಜಿಯವರಿಗೆ ಪ್ರತ್ಯೇಕ ಆಸನ ವ್ಯವಸ್ಥೆಗೊಳಿಸಲಾಗಿತ್ತು