ಕಲಬುರಗಿ: ತಾಂಡಾ ನಿವಾಸಿಗಳಿಗೆ ಹಕ್ಕು ಪತ್ರ ವಿತರಿಸಿದ ಪ್ರಧಾನಿ ಮೋದಿ
ಕಲಬುರಗಿ: ಜಿಲ್ಲೆಯ ಮಳಖೇಡದಲ್ಲಿ ಹೊಸದಾಗಿ ಘೋಷಿಸಲಾದ ಕಂದಾಯ ಗ್ರಾಮಗಳ ಅರ್ಹ ಫಲಾನುಭವಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಹಕ್ಕು ಪತ್ರ ವಿತರಿಸಿದರು.
ಕಲಬುರಗಿ, ಬೀದರ್, ರಾಯಚೂರು, ವಿಜಯಪುರ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಐದು ಜಿಲ್ಲೆಗಳ 51, 900 ತಾಂಡಾ ನಿವಾಸಿಗಳಿಗೆ ಹಕ್ಕು ಪತ್ರ ವಿತರಿಸಲಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಸಾಂಕೇತಿಕವಾಗಿ ಐವರಿಗೆ ಹಕ್ಕು ಪತ್ರ ವಿತರಿಸುವ ಮೂಲಕ ಈ ಯೋಜನೆಗೆ ಚಾಲನೆ ನೀಡಿದರು.
ಲಂಬಾಣಿ ಭಾಷೆಯಲ್ಲಿಯೇ ಭಾಷಣ ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ, ಸಂತಾ ಸೇವಾಲಾಲ್, ಬಸವೇಶ್ವರರು ಹಾಗೂ ಗಾಣಗಾಪುರ ದತ್ತಾತ್ತ್ರೇಯ ಅವರನ್ನು ಸ್ಮರಿಸಿದರು. ಕರ್ನಾಟ ಸರ್ಕಾರ ಸಾಮಾಜಿಕ ನ್ಯಾಯ ನೀಡುತ್ತಿದೆ. ಹಕ್ಕು ಪತ್ರ ವಿತರಣೆಯಿಂದ ಬಂಜಾರ ಸಮುದಾಯ ಅಭಿವೃದ್ಧಿಯಾಗಲಿದೆ. ಬರೋಬ್ಬರಿ 50 ವರ್ಷಗಳ ಬಳಿಕ ಈ ಬದಲಾವಣೆಯಾಗಿದೆ ಎಂದರು.
ಬಸವಣ್ಣ ಅವರು ಅನುಭವ ಮಂಟಪ ಮೂಲಕ ಸಾಮಾಜಿಕ ಕ್ರಾಂತಿ ಮಾಡಿದ್ದರು. ಅವರ ಆಶಯದಂತೆ ಎಲ್ಲಾ ಸಮುದಾಯದ ಅಭಿವೃದ್ಧಿಗೆ ಪಣ ತೊಡಲಾಗಿದೆ . ಡಬಲ್ ಎಂಜಿನ್ ಸರ್ಕಾರ ನಿಮ್ಮ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ರಾಷ್ಟ್ರದ ಪ್ರಗತಿಯಲ್ಲಿ ಬಂಜಾರ ಸಮುದಾಯ ಕೊಡುಗೆ ನೀಡುತ್ತಿದ್ದು, ಈ ಸಮುದಾಯದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
ಪಿಎಂ ಆವಾಸ್ ಮೂಲಕ ಎಲ್ಲಾ ಸೌಲಭ್ಯಗಳು ಸಿಗುತ್ತಿವೆ. ಮುದ್ರಾ ಯೋಜನೆಗಳಿಂದ ಪರಿಶಿಷ್ಟ ಸಮುದಾಯಕ್ಕೆ ಅನುಕೂಲವಾಗಿದೆ. ನೀರು, ಗ್ಯಾಸ್ ಸೇರಿದಂತೆ ಪ್ರತಿಯೊಂದು ಮೂಲಭೂತ ಸೌಕರ್ಯಗಳನ್ನು ಸರ್ಕಾರ ಒದಗಿಸುತ್ತಿದ್ದು, ಸಮಾಜದ ಪ್ರತಿ ವರ್ಗಕ್ಕೂ ಅನುಕೂಲಕರವಾದ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.
ಹಿಂದಿನ ಸರ್ಕಾರಗಳು ಈ ಸಮುದಾಯವನ್ನು ಕೇವಲ ವೋಟ್ ಬ್ಯಾಂಕ್ ಗಳನ್ನಾಗಿ ಮಾಡಿಕೊಂಡಿದ್ದವು.1993ರಲ್ಲಿ ಹಕ್ಕು ಪತ್ರ ನೀಡಲು ಶಿಫಾರಸ್ಸು ನೀಡಲಾಗಿತ್ತು.ಆದರೆ, ಪ್ರತಿಪಕ್ಷಗಳು ಅದಕ್ಕೆ ಮನ್ನಣೆ ನೀಡಿರಲಿಲ್ಲ ಎಂದು ತಿಳಿಸಿದ ಪ್ರಧಾನಿ ಮೋದಿ, ವಂಚಿತ ಸಮುದಾಯಗಳಿಗೆ ಎಲ್ಲಾ ರೀತಿಯ ಸವಲತ್ತು ನೀಡಲಾಗುತ್ತಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.