ಇನ್ನು ಮುಂದೆ ಪಿಯುಸಿ ಪ್ರಮಾಣ ಪತ್ರ ಇಲ್ಲದಿದ್ದರೆ ಪೆಟ್ರೋಲ್‌, ಡೀಸೆಲ್‌ ಸಿಗಲ್ಲ…!

ನವದೆಹಲಿ: ದೆಹಲಿಯಲ್ಲಿ ಅ. 25 ರಿಂದ ಪಿಯುಸಿ ಪ್ರಮಾಣ ಇಲ್ಲದವರಿಗೆ ಪೆಟ್ರೋಲ್ ಪಂಪ್‌ಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ನೀಡದೇ ಇರಲು ಎಎಪಿ ಸರ್ಕಾರ ನಿರ್ಧರಿಸಿದೆ.

ವಾಹನ ಮಾಲಿನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ದೆಹಲಿ ಸರ್ಕಾರ ಈ ತೀರ್ಮಾನಕ್ಕೆ ಬಂದಿದೆ. ಅಂದಹಾಗೆ ಪಿಯುಸಿ ಎಂದರೆ ‘ಪೊಲ್ಯುಷನ್‌ ಅಂಡರ್‌ ಕಂಟ್ರೋಲ್‌’ ಅಂದರೆ, ವಾಹನದ ‘ಮಾಲಿನ್ಯ ನಿಯಂತ್ರಣದಲ್ಲಿದೆ’ ಎಂಬುದಕ್ಕೆ ಸಂಬಂಧಿಸಿದ ಪ್ರಮಾಣ ಪತ್ರವಾಗಿದೆ. ಈ ಬಗ್ಗೆ ಅಧಿಸೂಚನೆಯನ್ನೂ ಶೀಘ್ರದಲ್ಲೇ ಹೊರಡಿಸಲಾಗುವುದು ಎಂದು ಪರಿಸರ ಸಚಿವ ಗೋಪಾಲ್ ರೈ ಹೇಳಿದ್ದಾರೆ.

ನಿಯಮದ ಅನುಷ್ಠಾನ ಮತ್ತು ಕಾರ್ಯವಿಧಾನಗಳ ಬಗ್ಗೆ ಚರ್ಚಿಸಲು ಸೆ. 29 ರಂದು ಕರೆಯಲಾಗಿದ್ದ ಪರಿಸರ, ಸಾರಿಗೆ ಮತ್ತು ಸಂಚಾರ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನ ಮಾಡಲಾಗಿದೆ. ಅದರಂತೆ ಅ.25 ರಿಂದ ನಿಯಮ ಜಾರಿಗೆ ಬರಲಿದೆ.

ರಾಜ್ಯದಲ್ಲಿ ಹೆಚ್ಚುತ್ತಿರುವ ಮಾಲಿನ್ಯಕ್ಕೆ ವಾಹನಗಳ ಹೊಗೆ ಪ್ರಮುಖ ಕಾರಣವಾಗಿದೆ. ಅದನ್ನು ಕಡಿಮೆ ಮಾಡುವುದು ಅನಿವಾರ್ಯವಾಗಿದೆ. ಆದ್ದರಿಂದ ಅ.25 ರಿಂದ ವಾಹನಕ್ಕೆ ಪಿಯುಸಿ ಪ್ರಮಾಣಪತ್ರವಿಲ್ಲದಿದ್ದರೆ ಪೆಟ್ರೋಲ್ ಪಂಪ್‌ಗಳಲ್ಲಿ ಪೆಟ್ರೋಲ್, ಡೀಸೆಲ್‌ ನೀಡದಿರಲು ನಿರ್ಧರಿಸಲಾಗಿದೆ ಎಂದು ರೈ ತಿಳಿಸಿದರು. 

Leave a Reply

Your email address will not be published. Required fields are marked *

error: Content is protected !!