ದಕ್ಷಿಣ ಪದವೀಧರ ಕ್ಷೇತ್ರ ಕಾಂಗ್ರೆಸ್ ದಾಖಲೆಯ ಗೆಲವು, ವಾಯುವ್ಯ ಕ್ಷೇತ್ರ ಬಿಜೆಪಿ ಅಭ್ಯರ್ಥಿಗೆ ಭರ್ಜರಿ ಗೆಲುವು
June 16, 2022
ಮೈಸೂರು ಜೂ.16 : ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ ದಾಖಲೆಯ ಗೆಲವು ಸಾಧಿಸಿದೆ.
ಮಂಡ್ಯ, ಮೈಸೂರು, ಹಾಸನ, ಚಾಮರಾಜನಗರ ಜಿಲ್ಲೆಗಳನ್ನು ಒಳಗೊಂಡ ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ಕಾಂಗ್ರೆಸ್ ಅಭ್ಯರ್ಥಿ ಮಧು ಜಿ.ಮಾದೇಗೌಡ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಮೈಸೂರು ಭಾಗದಲ್ಲಿ ಮತ್ತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹಿಡಿತ ಸಾಧಿಸಿದ್ದಾರೆ.
ಮಧು ಮಾದೇಗೌಡ 12,205 ಮತಗಳ ಭಾರಿ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದು, ಜೆಡಿಎಸ್ – ಬಿಜೆಪಿ ಕೋಟೆಯನ್ನು ಕಾಂಗ್ರೆಸ್ ಛಿದ್ರ ಮಾಡಿದಂತಾಗಿದೆ. ಈಗ ಬಿಜೆಪಿ ಎರಡನೇ ಸ್ಥಾನ ಹಾಗೂ ಜೆಡಿಎಸ್ ಮೂರನೇ ಸ್ಥಾನ ಪಡೆದುಕೊಂಡಿದೆ. ಮಧು ಜಿ. ಮಾದೇಗೌಡ ಒಟ್ಟು 45,275 ಮತಗಳನ್ನು ಪಡೆದುಕೊಂಡಿದ್ದರು. ಆದರೆ ಗೆಲುವಿಗೆ ನಿಗದಿಯಾದ 46,083 ಮತಗಳ ಕೋಟಾವನ್ನು ತಲುಪಲು 808 ಮತಗಳ ಕೊರತೆ ಎದುರಾಗಿತ್ತು. ಇದೇ ವೇಳೆ ಚುನಾವಣಾ ಆಯೋಗದ ನಿರ್ದೇಶನದಂತೆ ಮಧು ಜಿ. ಮಾದೇಗೌಡ ಪ್ರತಿಸ್ಪರ್ಧಿ ಬಿಜೆಪಿ ಮೈ. ವಿ. ರವಿಶಂಕರ್ ಎಲಿಮಿನೆಟ್ ಮಾಡಿ ಅಲ್ಲಿಂದ 808 ಪಡೆಯಲಾಯಿತು. ನಿಗದಿತ ಕೋಟಾ ತಲುಪುತ್ತಿದ್ದಂತೆಯೇ ಎಣಿಕೆ ಕಾರ್ಯ ನಿಲ್ಲಿಸಿ, ಮಧು ಅವರನ್ನು ವಿಜೇತ ಅಭ್ಯರ್ಥಿ ಎಂದು ಅಧಿಕೃತವಾಗಿ ಘೋಷಿಸಲಾಯಿತು.
ಬಿಜೆಪಿ ಅಭ್ಯರ್ಥಿ ಹಣಮಂತ ನಿರಾಣಿ ಭರ್ಜರಿ ಗೆಲುವು: ವಿಧಾನ ಪರಿಷತ್ ಚುನಾವಣೆ ವಾಯುವ್ಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಹಣಮಂತ ನಿರಾಣಿ ಭರ್ಜರಿ ಗೆಲುವು ಸಾಧಿಸಿದ್ದಾರೆ.
ವಾಯವ್ಯ ಪದವೀಧರ ಮತ ಕ್ಷೇತ್ರದ ಅಂತಿಮ ಫಲಿತಾಂಶ ಬುಧವಾರ ಮಧ್ಯರಾತ್ರಿ ಹೊರ ಬಿದ್ದಿದ್ದು, ಈ ವೇಳೆ ಬಿಜೆಪಿಯ ಹಣಮಂತ ನಿರಾಣಿ 44,815 ಮತಗಳನ್ನು ಪಡೆದರೆ, ಕಾಂಗ್ರೆಸ್ನ ಸುನೀಲ್ ಸಂಕ 10,122 ಮತ ಪಡೆದರು. ಇನ್ನು ತಿರಸ್ಕøತ ಮತಗಳೇ 9,006 ಇದ್ದು, ಒಟ್ಟು 65.922 ಮತಗಳು ಚಲಾವಣೆಯಾಗಿದ್ದವು. ಈ ಲೆಕ್ಕಾಚಾರ ಗಮನಿಸಿದರೆ ಬಿಜೆಪಿ ಅಭ್ಯರ್ಥಿ ಹಣಮಂತ ನಿರಾಣಿ ಅವರು 34,693 ಮತಗಳ ಅಂತರದಿಂದ ಐತಿಹಾಸಿಕ ದಾಖಲೆ ಗೆಲವು ದಾಖಲಿಸಿದ್ದಾರೆ.
ಹಾಗೂ ತಮ್ಮ ಯಶಸ್ಸಿನ ಬಗ್ಗೆ ಮಾತನಾಡಿದ ಹನುಮಂತ ನಿರಾಣಿ ಅವರು,ವಾಯುವ್ಯ ಕ್ಷೇತ್ರದ ಜನರು ಸ್ವಾಭಿಮಾನಿಗಳೆಂದು ತೋರಿಸಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ನ ಅನೇಕ ನಾಯಕರು ಬಂದು ಪ್ರಚಾರ ಮಾಡಿದರೂ ಅದನ್ನು ಲೆಕ್ಕಿಸದೆ ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಚುನಾವಣೆ ಫಲಿತಾಂಶವು ಜನರಿಗೆ, ಜನಪರ ಆಡಳಿತಕ್ಕೆ ಸಂದ ಯಶಸ್ಸು. ಸರ್ಕಾರದ ಕಾರ್ಯಕ್ರಮಗಳಿಗೆ, ಪಕ್ಷದ ಸಂಘಟಿತ ಚುನಾವಣಾ ಹೋರಾಟಕ್ಕೆ ಸಿಕ್ಕ ಮನ್ನಣೆಯಾಗಿದೆ. ಜಾತಿ, ಧರ್ಮ, ಹಣ – ಇಂತಹ ಯಾವುದೇ ದೌರ್ಬಲ್ಯಕ್ಕೆ ಬಲಿಯಾಗದೆ ನಮ್ಮ ಸರ್ಕಾರದ ಸಾಧನೆ, ಪಕ್ಷದ ಸಿದ್ಧಾಂತ ಮತ್ತು ಅಭ್ಯರ್ಥಿಗಳ ಅರ್ಹತೆ ಗುರುತಿಸಿ ಗೆಲ್ಲಿಸಿದ ಮತದಾರರಿಗೆ ಶರಣು ಎಂದು ಅವರು ಹೇಳಿದ್ದಾರೆ. ಹಾಗೂ ಈ ಫಲಿತಾಂಶ 2023ರ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ದಾಖಲೆಯ ಮತಗಳ ಅಂತರದಲ್ಲಿ ವಿಜಯ ಸಾಧಿಸಿದ ಪಕ್ಷದ ಅಭ್ಯರ್ಥಿ ಹಾಗೂ ಸಹೋದರ ಹಣಮಂತ ಆರ್ ನಿರಾಣಿ ಅವರಿಗೆ ಸಚಿವ ಮುರುಗೇಶ್ ನಿರಾಣಿ ಅವರು ಅಭಿನಂದನೆ ತಿಳಿಸಿದ್ದಾರೆ.