ಜೀವಂತ ಕೋಳಿಯ ಅಂಗಾಂಗ ಮುರಿದು ಮಾಂಸ ಮಾಡಿ ವಿಕೃತಿ- ಮಾಲಕನ ಬಂಧನ
ತಿರುವನಂತಪುರಂ ಎ.30: ತಮಿಳುನಾಡಿನ ಕೊಲ್ಲಂಗೋಡಿನ ಕನ್ನನಕಂನಲ್ಲಿ ಜೀವಂತ ಕೋಳಿಯ ಅಂಗಾಂಗ ಮುರಿದು ಮಾಂಸ ಮಾಡಿ ವಿಕೃತಿ ಮೆರೆದಿದ್ದ ಕೋಳಿ ಫಾರ್ಮ್ ಮಾಲಕನನ್ನು ಕೊಲ್ಲಂಕೋಡು ಪೊಲೀಸರು ಬಂಧಿಸಿದ್ದಾರೆ.
36 ವರ್ಷ ವಯಸ್ಸಿನ ಮನು ಬಂಧಿತ ಆರೋಪಿ. ಈತ ಜೀವಂತ ಕೋಳಿಯ ಅಂಗಾಂಗಗಳನ್ನು ಮುರಿದು ಮಾಂಸ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಲ್ಲೆಡೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ಸಾಮಾನ್ಯವಾಗಿ ಕೋಳಿಯನ್ನು ಒಂದೇ ಏಟಿಗೆ ಕುತ್ತಿಗೆಗೆ ಹೊಡೆದು ಕೊಲ್ಲುತ್ತಾರೆ. ಆದರೆ ಆರೋಪಿಯು ಕೋಳಿಯ ಕಾಲು, ರೆಕ್ಕೆಗಳನ್ನು ಮುರಿದು ಬಳಿಕ ಕುತ್ತಿಗೆಯನ್ನು ಮುರಿದು ಅತ್ಯಂತ ಹಿಂಸಾತ್ಮಕವಾಗಿ ಕೋಳಿಯನ್ನು ಕೊಲ್ಲುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ವರದಿಗಳ ಪ್ರಕಾರ ಕೋಳಿ ಮಾಂಸ ಕೊಂಡುಕೊಳ್ಳಲು ಬಂದಿದ್ದ ಯುವಕ ಈದೃಶ್ಯವನ್ನು ಮೊಬೈಲ್’ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿಹಂಚಿಕೊಂಡಿದ್ದು, ಘಟನೆ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಕೇರಳ ರಾಜ್ಯ ಕೋಳಿ ವರ್ತಕರ ಸಮಿತಿ ಆಕ್ರೋಶ ವ್ಯಕ್ತಪಡಿಸಿದ್ದು, ಈತನ ಕೃತ್ಯದಿಂದಾಗಿ ಇತರ ಕೋಳಿ ವರ್ತಕರಿಗೂ ಕೆಟ್ಟ ಹೆಸರು ಬರುತ್ತಿದೆ. ಆದ್ದರಿಂದ ಆರೋಪಿಯನ್ನು ತಕ್ಷಣವೇ ಬಂಧಿಸಬೇಕು ಎಂದು ಒತ್ತಾಯಿಸಿದ್ದರು. ಈ ಬಗ್ಗೆ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.