ಲಿಪ್‍ಸ್ಟಿಕ್ ಹಚ್ಚಿ ವಿಚಿತ್ರವಾಗಿ ವರ್ತಿಸಿದ ಪತಿ… ಮುಂದೇನಾಯ್ತು..?
ಬೆಂಗಳೂರು, ಎ.1 : ಗಂಡ ಲಿಪ್‍ಸ್ಟಿಕ್ ಹಚ್ಚಿಕೊಂಡು ಹೆಂಗಸರ ಒಳ ಉಡುಪು ತೊಟ್ಟು ವಿಚಿತ್ರವಾಗಿ ವರ್ತಿಸುತ್ತಾನೆಂದು ಪತ್ನಿಯೊಬ್ಬರು ಪೊಲೀಸ್ ಠಾಣೆ ಮೆಟ್ಟಲೇರಿರುವ ಘಟನೆ ವರದಿಯಾಗಿದೆ.
ಈ ಬಗ್ಗೆ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಠಾಣೆಗೆ ದೂರು ನೀಡಿರುವ ಮಹಿಳೆಯು “ನನ್ನ ಗಂಡ ಲಿಪ್‍ಸ್ಟಿಕ್ ಹಚ್ಚಿಕೊಂಡು ಹೆಂಗಸರ ಒಳ ಉಡುಪು ತೊಟ್ಟು ದಿನದಿಂದ ದಿನಕ್ಕೆ ವಿಚಿತ್ರವಾಗಿ ವರ್ತಿಸುತ್ತಾರೆ ಇದನ್ನು ಪ್ರಶ್ನಿಸಿದ್ದಕ್ಕೆ ಕಿರುಕುಳ ನೀಡುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, “ಕುಮಾರಸ್ವಾಮಿ ಠಾಣೆ ವ್ಯಾಪ್ತಿಯಲ್ಲಿ ವಾಸವಿರುವ ಮಹಿಳೆಯಿಂದ ದೂರು ಬಂದಿದ್ದು, ವರದಕ್ಷಿಣೆಗಾಗಿ ಪೀಡಿಸಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿರುವ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ” ಎಂದು ತಿಳಿಸಿದ್ದಾರೆ.
ಇನ್ನು ವನುಷಾ ಎಂಬಾಕೆ ಕಳೆದ ಮೂರು ವರ್ಷಗಳ ಹಿಂದೆ ಮ್ಯಾಟ್ರಿಮೋನಿ ಪ್ರಣವ್ ಪರಿಚಯಗೊಂಡಿದ್ದು, ತಾನು ಎಂಟೆಕ್ ಪದವೀಧರ, ಒಳ್ಳೆ ಕೆಲಸದಲ್ಲಿ ಇರುವುದಾಗಿ ಹೇಳಿದ್ದ. ಗುರು-ಹಿರಿಯರ ಸಮ್ಮುಖದಲ್ಲಿ 2020ರಲ್ಲಿ ಇಬ್ಬರ ಮದುವೆಯಾಗಿತ್ತು. ವರದಕ್ಷಿಣೆ ರೂಪದಲ್ಲಿ 800 ಗ್ರಾಂ ಚಿನ್ನ, ಒಂದು ಕೆ.ಜಿ.ಬೆಳ್ಳಿ ಹಾಗೂ ಐದು ಲಕ್ಷ ಹಣ ನೀಡಲಾಗಿತ್ತು. ಆದರೆ ಮೊದಲ ದಿನದಿಂದಲೂ ವಿಚಿತ್ರವಾಗಿ ವರ್ತಿಸುತ್ತಿರುವ ಪತಿ, ತಮಗೆ ಪುರುಷರೆಂದರೆ ಇಷ್ಟವೆಂದು ಕೂಗಾಡುತ್ತಾರೆ. ಅದನ್ನು ಪ್ರಶ್ನಿಸಿದರೆ ಮನೆ ಬಿಟ್ಟು ಹೋಗುವಂತೆ ಹಾಗೂ ವರದಕ್ಷಿಣೆ ತರುವಂತೆ ಪೀಡಿಸುತ್ತಾರೆ. ಹಲವು ಬಾರಿ ಹಲ್ಲೆ ಕೂಡ ಮಾಡಿದ್ದಾರೆ ಎಂದು ವನುಷಾ ದೂರು ನೀಡಿದ ಮೇರೆಗೆ ಪತಿ ಪ್ರಣವ್, ಮಾವ ಮೂರ್ತಿ ಹಾಗೂ ಅತ್ತೆ ಶ್ರೀದೇವಿ ಎಂಬುವರ ವಿರುದ್ಧ ವರದಕ್ಷಣೆ ಕಿರುಕುಳ ದೂರು ದಾಖಲಾಗಿದೆ.