ಕಾರ್ಕಳ: ಪೌಷ್ಟಿಕ ಕೈತೋಟ ಹಾಗೂ ತಾರಸಿ ಕೃಷಿ ಕಾರ್ಯಾಗಾರ

ಕಾರ್ಕಳ (ಉಡುಪಿ ಟೈಮ್ಸ್ ವರದಿ): ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ, ಐ.ಸಿ.ಎ.ಆರ್. ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ ಉಡುಪಿ ಹಾಗು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಡುಪಿ ಜಿಲ್ಲೆ ಇವರ ಜಂಟಿ ಆಶ್ರಯದಲ್ಲಿ “ಪೌಷ್ಟಿಕ ಕೈತೋಟ ಹಾಗೂ ತಾರಸಿ ಕೃಷಿ” ಬಗ್ಗೆ ಮಾಹಿತಿ ಕಾರ್ಯಕ್ರಮವು ಇತ್ತೀಚೆಗೆ ಜಿಲ್ಲಾ ಮಲೆಕುಡಿಯ ಸಂಘದ ಕೇಂದ್ರ ಕಚೇರಿ ಪೇರಡ್ಕದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಕಾರ್ಕಳ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಉಮೇಶ್ ರವರು ದೀಪ ಬೆಳಗಿಸಿ ಉದ್ಘಾಟಿಸಿ, ಶುಭ ಹಾರೈಸಿದರು.
ಭಾರತೀಯ ವಿಕಾಸ ಟ್ರಸ್ಟ್ ನ ಯೋಜನಾ ವ್ಯವಸ್ಥಾಪಕರಾದ ಅರುಣ್ ಪಟವರ್ಧನ ರವರು ಪ್ರಸ್ತಾವನೆಗೈದು ಕೈತೋಟದ ಪ್ರಾಮುಖ್ಯತೆಯ ಬಗ್ಗೆ ತಿಳಿಸಿದರಲ್ಲದೆ ಇಲ್ಲಿ ದೊರಕುವ ತಾಜಾ ತರಕಾರಿ, ಹಣ್ಣುಗಳು ನಮ್ಮ ದೇಹಕ್ಕೆ ಪೌಷ್ಟಿಕತೆಯನ್ನು ಒದಗಿಸಿದರೆ, ಕೈತೋಟದ ಕಾಯಕ ಉತ್ತಮ ಆರೋಗ್ಯವನ್ನು ನೀಡಬಲ್ಲದ್ದು ಎಂದರು.
ವೇದಿಕೆಯಲ್ಲಿ ವಲಯ ಕೃಷಿ ಸಂಶೋಧನಾ ಕೇಂದ್ರ ಬ್ರಹ್ಮಾವರ ಇಲ್ಲಿನ ಸಹಾಯಕ ಪ್ರಾಧ್ಯಾಪಕರಾದ ಡಾ| ಸಂದೇಶ್ ಬ್ರಹ್ಮಾವರ, KVK ಯ ಸಸ್ಯ ಸಂರಕ್ಷಣಾ ವಿಜ್ಞಾನಿ ಡಾ|ಸಚಿನ್, ಉಡುಪಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಂಯೋಜಕರಾದ ಅವಿನಾಶ್, ಭಾರತೀಯ ವಿಕಾಸ ಟ್ರಸ್ಟ್ ನ ಸುರೇಶ್, ದೋಣಿಪಲ್ಕೆ ಅಂಗನವಾಡಿ ಕಾರ್ಯಕರ್ತೆ ಶ್ವೇತಾ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಡಾ|ಸಚಿನ್ ರವರು ಕೈತೋಟದಲ್ಲಿ ಬೆಳೆಯಬಹುದಾದ ತರಕಾರಿ ಹಣ್ಣುಗಳ ಬೇಸಾಯ ಕ್ರಮಗಳನ್ನು ತಿಳಿಸಿದರು. ಅಂತೆಯೇ ಡಾ| ಸಂದೇಶ್ ರವರು ಕೈತೋಟದ ನಿರ್ವಹಣೆಯ ಬಗ್ಗೆ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅವಿನಾಶ್ ರವರು ಸ್ವ ಸಹಾಯ ಸಂಘಗಳಿಗೆ ಸರ್ಕಾರದಿಂದ ಸಿಗುವ ಸವಲತ್ತುಗಳ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಪಾರ್ವತಿ ಮತ್ತು ಸಿಂಧೂರ ಸ್ತ್ರೀ ಶಕ್ತಿ ಸ್ವಸಹಾಯ ಸಂಘ ಪೇರಡ್ಕ, ಮಾಳ ಇದರ ಸಹಭಾಗಿತ್ವದಲ್ಲಿ ಮಲೆಕುಡಿಯ ಸಂಘ ಗ್ರಾಮ ಸಮಿತಿ ಪೇರಡ್ಕ ಸದ್ಯಸರು ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಂಡರು.

Leave a Reply

Your email address will not be published. Required fields are marked *

error: Content is protected !!